ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಹಿಂದೆ ಜನತಾದಳದಲ್ಲಿದ್ದಾಗ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾಗ ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಕಾಂಗ್ರೆಸ್‍ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಸಂವಿಧಾನ ವಿರೋಧಿಗಳು ಎಂದು ಮಾತನಾಡಿದ್ದರು ಎಂದು ಬಿಜೆಪಿ ರಾಜ್ಯ ವಕ್ತಾರಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದವರು. ಅದಕ್ಕೆ ಮುಂಚೆ ಅವರು ಬೇರೆ ಕಡೆ ಇದ್ದರು. ಸಿದ್ದರಾಮಯ್ಯ ಒಬ್ಬ ಡೋಂಗಿ ರಾಜಕಾರಣಿ. ಅವರು ಕಾಂಗ್ರೆಸ್ ಪಕ್ಷಕ್ಕೆ ಹೊಟ್ಟೆಪಾಡಿಗಾಗಿ ಹೋದವರು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಯಾತ್ರೆಗಾಗಿ ಪಾಕ್ ಗೆ ತೆರಳಿದ್ದ ಮಹಿಳೆ, ಪತಿಯ ಸಮ್ಮುಖದಲ್ಲಿ ಮುಸ್ಲಿಂ ವ್ಯಕ್ತಿ ಜತೆ ವಿವಾಹ!
ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ಸನ್ನು ಹೊಗಳಲು ಆರಂಭಿಸಿದ್ದಾರೆ. ಸಂವಿಧಾನವನ್ನೇ ತಿರುಚಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ಇವರು ಒಪ್ಪುತ್ತಾರಾ ಎಂದೂ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಬದ್ಧತೆ ಇಲ್ಲದ ಸಮಯಸಾಧಕ ರಾಜಕಾರಣಿ. ಕೇವಲ ಹೊಟ್ಟೆಪಾಡಿಗಾಗಿ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿನರೇಂದ್ರ ಮೋದಿಯವರ ಭಾಷಣದ ವೇಳೆ ಸಂವಿಧಾನ ದಿನವನ್ನೇ ಕಾಂಗ್ರೆಸ್ ಬಹಿಷ್ಕರಿಸಿದೆ. ಸಿದ್ದರಾಮಯ್ಯ ಅವರೂ ಸಂವಿಧಾನ ದಿನದ ಬಗ್ಗೆ ಆಕ್ಷೇಪಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ಸಂವಿಧಾನಕರ್ತೃ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ಪಕ್ಷದವರು ಗೌರವ ನೀಡಿದವರಲ್ಲ. ಕಾಂಗ್ರೆಸ್ ನಿಷ್ಠೆ ಭಾರತಕ್ಕೆ ಇದೆಯೇ ಅಥವಾ ಬೇರೆ ದೇಶಕ್ಕೆ ಅವರ ನಿಷ್ಠೆಯೇ ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.