Advertisement

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

03:55 PM Jul 02, 2022 | Team Udayavani |

ಬೆಂಗಳೂರು: ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಸರ್ಕಾರ ಬಾಯಿ ಮಾತಿನ ಭರವಸೆ ನೀಡಿದರೆ ಸಾಲದು, ಬೇಡಿಕೆಗಳನ್ನು ಈಡೇರಿಸಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮುಷ್ಕರಕ್ಕೆ ತಮ್ಮ ಬೆಂಬಲ ಸೂಚಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಿತ್ತು. ವೇತನ ಹೆಚ್ಚಳ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ಪೌರ ಕಾರ್ಮಿಕರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದರು.

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಬರವಣಿಗೆಯಲ್ಲಿ ಭರವಸೆ ನೀಡಿದೆ. ಆದರೆ ಅಧಿಕೃತ ಆದೇಶ ಹೊರಡಿಸಿಲ್ಲ. ಈ ರೀತಿ ಮೋಸ ಮಾಡದೆ ಕೂಡಲೇ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ತಿಳಿಸಿದರು.

ಪೌರ ಕಾರ್ಮಿಕರ ಸೇವೆ ಕಾಯಂ, ಪ್ರತಿ ತಿಂಗಳು ವೇತನ ಪಾವತಿ ಕುರಿತು ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಬರವಣಿಗೆಯಲ್ಲಿ ನೀಡಿರುವ ಭರವಸೆ ಕಣ್ಣೊರೆಸುವ ತಂತ್ರವಾಗಿದೆ. ಸರ್ಕಾರದ ಈ ಭರವಸೆಯನ್ನು ನಂಬಬಾರದು. ಚಳವಳಿಯನ್ನು ವಾಪಸ್ ಪಡೆಯಲಿ ಎಂಬ ಕಾರಣಕ್ಕೆ ಸರ್ಕಾರ ಈ ನಾಟಕವಾಡಿದೆ ಎಂದು ಹೇಳಿದರು.

Advertisement

ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಹೊರ ಗುತ್ತಿಗೆ, ಗುತ್ತಿಗೆ ಸೇರಿದಂತೆ ಎಲ್ಲ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲಾಗುವುದು. ಪೌರ ಕಾರ್ಮಿಕರ ಹಿತ ಕಾಯಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.

ತಳ ಸಮುದಾಯದ ಪೌರ ಕಾರ್ಮಿಕರ ಜೀವನ ಕಷ್ಟಕರ. ಜೀವದ ಹಂಗು ತೊರೆದು, ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುವ ಅವರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ನಮ್ಮ ಬೆಂಬಲ ಸದಾ ನಿಮಗೆ ಇರುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next