ಬೆಂಗಳೂರು: ಬಿಜೆಪಿಯದ್ದು ಪರಿವರ್ತನಾ ಯಾತ್ರೆಯಲ್ಲ ತೀರ್ಥಯಾತ್ರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದರೆ, ಇದು ಪರಿವರ್ತನಾ ಯಾತ್ರೆಯಲ್ಲ, ಪಶ್ಚತ್ತಾಪದ ಯಾತ್ರೆ. ಇದು ಬಿಜೆಪಿಯ ಫ್ಲಾಪ್ ಯಾತ್ರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಗುರುವಾರ ತುಮಕೂರು ರಸ್ತೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದರು. ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪರಿವರ್ತನಾ ಯಾತ್ರೆಗೆ 3 ಲಕ್ಷ ಜನ ಸೇರಿಸ್ತೇವೆ ಎಂದು ಹೇಳಿದ್ದರು, ಆದರೆ 30 ಸಾವಿರ ಜನಾನೂ ಸೇರಿಲ್ಲ ಎಂದರು.
ಅಮಿತ್ ಶಾ ಅವರಿಂದ ನಾವೇನು ಪಾಠ ಕಲಿಯಬೇಕಾಗಿಲ್ಲ. ಕನ್ನಡದ ಬಗ್ಗೆ ನಮಗೆ ಬದ್ಧತೆ ಅಭಿಮಾನ ಇದೆ ಎಂದು ರಾಜ್ಯೋತ್ಸವಕ್ಕಿಂತ ಟಿಪ್ಪು ಜಯಂತಿ ಮಾಡುವ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯದ ಜನ ಬಿಜೆಪಿ ಜತೆಗಿಲ್ಲ, ನಮ್ಮ ಜತೆಗಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬಿಜೆಪಿಯದ್ದು ಫ್ಲಾಪ್ ಯಾತ್ರೆ: ದಿನೇಶ್ ಗುಂಡೂರಾವ್
ಭಾರತೀಯ ಜನತಾ ಪಕ್ಷದವರದ್ದು ಫ್ಲಾಪ್ ಯಾತ್ರೆ. ಫ್ಲಾಪ್ ರಾಲಿಯಿಂದ ಬಿಜೆಪಿ ನಾಯಕರ ಪರಿವರ್ತನೆಯಾಗಬಹದು. ಬಿಜೆಪಿ ನಾಯಕರು ಪಶ್ಚತ್ತಾಪ ಯಾತ್ರೆ ಮಾಡಿದರೆ ಒಳ್ಳೇದು ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದು, ಇಂದಿನ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಭಾಗವಹಿಸಲು ಕಾರ್ಯಕರ್ತರೇ ಉತ್ಸಾಹ ತೋರಲಿಲ್ಲ, ಜನರೂ ಕೂಡಾ ಇರಲಿಲ್ಲ ಎಂದರು.