ಮುಂಡಗೋಡ: ಸಿದ್ದರಾಮಯ್ಯ ಅವರಿಗೆ ಮಧ್ಯಂತರ ಚುನಾವಣೆಯ ಕನಸಿದೆ. ಅವರಿಗೆ ಅಧಿಕಾರವಿಲ್ಲದೆ ಮೂರುವರೆ ವರ್ಷ ಆಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ. ಸರ್ಕಾರ ಚುನಾವಣೆಗಿಂತ ಒಂದು ದಿವಸ ಮುಂಚೆಯೂ ವಿಸರ್ಜನೆ ಆಗುವುದಿಲ್ಲ. ನೂರಕ್ಕೆ ನೂರರಷ್ಟು ಅವಧಿ ಮುಗಿಸುತ್ತೇವೆ. ಬರುವ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೂ ಬರುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಭಾನುವಾರ ಸಂಜೆ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಹೊಸ ಶಕೆ ಆರಂಭವಾಗಲಿ. ಇಂದು ಸ್ವಾತಂತ್ರ್ಯದ ಪುಣ್ಯ ದಿನ. ರಾಜ್ಯದಲ್ಲಿ ಒಟ್ಟು 22 ಲಕ್ಷ ಕಾರ್ಮಿಕರಿಗೆ ಕಿಟ್ ನೀಡಿದ್ದು ಸುಪ್ರೀಂ ಕೋರ್ಟ್, ಹೈಕೋರ್ಟ್, ಬ್ಲಾಕ್ ಮಿಷನ್, ಮಾನವ ಆಯೋಗದ ಸಲಹೆ ಮತ್ತು ಯಡಿಯೂರಪ್ಪ ಅವರ ಅನುಮತಿ ಪಡೆದು ಕಿಟ್ ನೀಡಿದ್ದೇವೆ. ಕಿಟ್ ವಿತರಣೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಆಗಿದೆ. ಕೇವಲ ಕಟ್ಟಡ ಕಾರ್ಮಿಕರಿಗೆ ಮಾತ್ರವಲ್ಲದೆ ಅಸಂಘಟಿತ ಕಾರ್ಮಿಕ ವಲಯಕ್ಕೂ ಕಿಟ್‌ಗಳನ್ನು ವಿತರಿಸಿದ್ದೇವ ಎಂದರು.
ನಮ್ಮನ್ನು ಬಿಜೆಪಿ ವಲಸಿಗರು, ಬಾಂಬೆ ಟೀಂ ಮತ್ತು ಬಾಂಬೆ ಸ್ನೇಹಿತರು ಅಂತ ಮಾಧ್ಯಮದವರು ಹಲವು ಬಾರಿ ಹೇಳಿದ್ದೀರಿ. ನಾವು ಭಾರತೀಯ ಜನತಾ ಪಕ್ಷ ಸೇರಿ ಭಾರತೀಯ ಜನತಾ ಪಕ್ಷದ ಚಿಹ್ನೆ ಮೇಲೆ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದೇವೆ ಎಂದರು.
ಈ ವರ್ಷವೂ ಮಳಗಿ ಧರ್ಮಾ ಜಲಾಶಯ ತುಂಬಿ ಕೋಡಿ ಬಿದ್ದ ಕಾರಣ ಲೋಕಸಭಾ ಸಂಸದ ಶಿವಕುಮಾರ ಉದಾಸಿ ಅವರ ಜತೆ ಸೇರಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ರೈತರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇವೆ ಎಂದು ಹೇಳಿದರು.
ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಮುಂಬರುವ ಹಾನಗಲ್ಲ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಗೆಲುವು ನಿಶ್ಚಿತ. ನಮಗೆ ವಿಶ್ವಾಸ ಇದೆ. ಭಾರತೀಯ ಜನತಾ ಪಕ್ಷ ಯಾವುದೇ ಅಭ್ಯರ್ಥಿಯನ್ನು ಹಾನಗಲ್ಲ ಕ್ಷೇತ್ರಕ್ಕೆ ನಿಲ್ಲಿಸಿದರೂ ಗೆಲುವು ಸಾಧಿಸುತ್ತಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಈಗ ಟೇಕಪ್ ಆಗಿದೆ. ರೈತರ ಮಕ್ಕಳಿಗೆ ಸರ್ಕಾರ ಕೊವೀಡ್ ವೇಳೆಯಲ್ಲೂ ಒಳ್ಳೆಯ ಯೋಜನೆ ನೀಡಿದೆ. ಇದು ಮುಖ್ಯಮಂತ್ರಿಗಳಿಗೆ ಇರುವ ಸಾಮಾಜಿಕ ಬದ್ಧತೆ ಹಾಗೂ ಕಳಕಳಿ ತೋರಿಸುತ್ತದೆ ಎಂದರು.