Advertisement

ಸಿದ್ದರಾಮಯ್ಯ ಕೈ ಕಟ್ಟಿಹಾಕಲು “ಹಳ್ಳಿ ಹಕ್ಕಿ’ಗೆ ರಾಜ್ಯಾಧ್ಯಕ್ಷ ಸ್ಥಾನ

06:35 AM Aug 07, 2018 | |

ಮೈಸೂರು: ಸಮನ್ವಯ ಸಮಿತಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರದ ತೀರ್ಮಾನಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಪತ್ರ ಸಮರ ನಡೆಸಿ, ಸರ್ಕಾರದ ವೇಗಕ್ಕೆ ಕಡಿವಾಣ ಹಾಕಿ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕಲು ಅವರದೇ ಸಮುದಾಯದ ಅಡಗೂರು ಎಚ್‌.ವಿಶ್ವನಾಥ್‌ ಅವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ತಂತ್ರಕ್ಕೆ ಶಾಸಕ ಎಚ್‌.ವಿಶ್ವನಾಥ್‌ ದಾಳವಾಗಿ ಬಳಕೆಯಾಗುತ್ತಿದ್ದಾರೆ ಎಂಬುದು ನಾಗರಿಕ ವಲಯದ ಅಭಿಮತ.

ಕಾಂಗ್ರೆಸ್‌ನಲ್ಲಿದ್ದಷ್ಟು ಕಾಲವೂ ಎಚ್‌.ವಿಶ್ವನಾಥ್‌ ಅವರು, ಜೆಡಿಎಸ್‌ ಪಕ್ಷವನ್ನು ವಾಚಾಮಗೋಚರವಾಗಿ ಟೀಕಿಸಿದ್ದಾರೆ. ಕಡೆಗೆ ತಾವೇ ಮುಂದೆ ನಿಂತು ಕಾಂಗ್ರೆಸ್‌ಗೆ ಕರೆತಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೂರೇ ವರ್ಷಕ್ಕೆ ಸಾರ್ವಜನಿಕವಾಗಿಯೇ ಸಿದ್ದರಾಮಯ್ಯ ಅವರ ತೀರ್ಮಾನಗಳನ್ನು ವಿಶ್ವನಾಥ್‌ ವಿರೋಧಿಸುತ್ತಾ ಬಂದರು.

ಕರಾವಳಿ ಭಾಗದಲ್ಲಿ ಜನಾರ್ದನ ಪೂಜಾರಿ, ಹಳೇ ಮೈಸೂರು ಭಾಗದಲ್ಲಿ ಎಚ್‌.ವಿಶ್ವನಾಥ್‌ ಅವರಿಬ್ಬರೂ ಕಾಂಗ್ರೆಸ್‌ನಲ್ಲಿದ್ದರೂ ಸಿದ್ದರಾಮಯ್ಯನವರಿಗೆ ಮುಳ್ಳಾಗಿ ಪರಿಣಮಿಸಿದರು. ಇದರ ಪರಿಣಾಮ ಇಬ್ಬರ ನಡುವಿನ ಸಂಬಂಧ ಸರಿಪಡಿಸಲಾರದಷ್ಟು ಹಳಸಿತು. ಎಷ್ಟರಮಟ್ಟಿಗೆ ಎಂದರೆ ಬಿಡಿಎನಲ್ಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ್‌ ಅವರ ಅಳಿಯನನ್ನು ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ವರ್ಗಾಯಿಸಿ ಸೇಡು ತೀರಿಸಿಕೊಂಡಿದ್ದರು.

ವಿಶ್ವನಾಥ್‌ ಅನಾರೋಗ್ಯದಿಂದ ತಮಿಳುನಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಸೌಜನ್ಯಕ್ಕೆ ಭೇಟಿ ಮಾಡುವುದಿರಲಿ, ಕರೆ ಮಾಡಿಯೂ ವಿಚಾರಿಸಲಿಲ್ಲ. ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಯಿಂದ ದೂರವಿಟ್ಟು ಉಪೇಕ್ಷೆ ಮಾಡಲಾಯಿತು.

Advertisement

ರಾಜಕೀಯದ ಸಂಧ್ಯಾಕಾಲದಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಬೇಸತ್ತ ಎಚ್‌.ವಿಶ್ವನಾಥ್‌, ಅನಿವಾರ್ಯವಾಗಿ ಜೆಡಿಎಸ್‌ನ ಕದ ತಟ್ಟಿದರು. ಕುರುಬ ಸಮುದಾಯದ ಪ್ರಭಾವಿ ನಾಯಕನಾಗಿ, ಹಿಂದುಳಿದ ವರ್ಗಗಳ ನಾಯಕನಾಗಿ ಬೆಳೆದು ನಿಂತಿರುವ ಸಿದ್ದರಾಮಯ್ಯ ಅವರನ್ನು ಹಣಿಯಲು ದೇವೇಗೌಡರಿಗೆ ಒಳ್ಳೆಯ ಅಸ್ತ್ರ ಸಿಕ್ಕಂತಾಯಿತು. ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ನೀಡಿ ಶಾಸಕರಾಗಿ ಗೆಲ್ಲಿಸಿಕೊಂಡು, ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಿ ದುಡಿಸಿಕೊಳ್ಳುವ ಬದಲಿಗೆ ಅಧಿಕಾರ ರಾಜಕಾರಣದಿಂದ ಅವರನ್ನು ದೂರವಿಟ್ಟು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷ ರಾಜಕಾರಣಕ್ಕೆ ದುಡಿಸಿಕೊಳ್ಳಲು ಪಟ್ಟಕಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಎತ್ತುವ ಪ್ರಶ್ನೆಗಳಿಗೆ ವಿಶ್ವನಾಥ್‌ ಅವರಿಂದ ತಿರುಗೇಟು ನೀಡಲು ಗೌಡರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಮತ್ತೂಂದು ವಿಧದಲ್ಲಿ ಕುರುಬ ಸಮುದಾಯದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಪ್ರಾಬಲ್ಯ ಕುಗ್ಗಿಸುವುದು, ಎಚ್‌.ವಿಶ್ವನಾಥ್‌ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಮೂಲಕ ಇದು ಅಪ್ಪ-ಮಕ್ಕಳ ಪಕ್ಷವಲ್ಲ ಎಂದು ತೋರಿಸಿಕೊಳ್ಳುವುದು, ಜತೆಗೆ ಒಕ್ಕಲಿಗ ಸಮಾಜದವರ ಬಾಹುಳ್ಯವಿರುವ ಪಕ್ಷವೂ ಅಲ್ಲ, ನಾವು ಕುರುಬ ಸಮುದಾಯದ ವಿರೋಧಿಯೂ ಅಲ್ಲ, 2004ರಲ್ಲಿ ಸಿದ್ದರಾಮಯ್ಯ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿತ್ತು. ಇದೀಗ ಅದೇ ಸಮುದಾಯದ ನಾಯಕನಿಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ ಎಂದು ಬಿಂಬಿಸುವುದು. ಆ ಮೂಲಕ ಮುಂದಿನ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮತಬುಟ್ಟಿಗೆ ಕೈಹಾಕುವುದು ದೇವೇಗೌಡರ ಲೆಕ್ಕಾಚಾರ ಎಂದು ಬಣ್ಣಿಸಲಾಗುತ್ತಿದೆ.

ಆರೋಗ್ಯ ಸಮಸ್ಯೆಯ ಕಾರಣ ನೀಡಿ ರಾಜ್ಯಾಧ್ಯಕ್ಷ ಜವಾಬ್ದಾರಿ ಹೊರಲು ಹಿಂದೇಟು ಹಾಕಿದ್ದ ವಿಶ್ವನಾಥ್‌ ಅವರು, ಕಡೆಗೂ ದೇವೇಗೌಡರ ಮಾತಿಗೆ ಕಟ್ಟುಬಿದ್ದು ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದ್ದಾರೆ. ದೇವೇಗೌಡರು- ಕುಮಾರಸ್ವಾಮಿ ಅವರ ಮಾತೇ ಅಂತಿಮ ಎಂಬಂತಿರುವ ಪಕ್ಷದಲ್ಲಿ ವಿಶ್ವನಾಥ್‌ ಅವರ ಮಾತಿಗೆ ಮನ್ನಣೆ ಸಿಗಲಿದೆಯೇ ನೋಡಬೇಕು.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next