Advertisement

ಸಿದ್ದರಾಮಯ್ಯ ಫ‌ುಲ್‌ ಆ್ಯಕ್ಟೀವ್‌

06:00 AM Aug 25, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫ‌ುಲ್‌ ಆ್ಯಕ್ಟೀವ್‌ ಆಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯ ನಂತರ ಸ್ವಲ್ಪ ದಿನ ತಾವಾಯ್ತು, ಬಾದಾಮಿ ಆಯ್ತು ಎಂಬಂತಿದ್ದ ಸಿದ್ದರಾಮಯ್ಯ ಇದೀಗ ಮತ್ತೆ ರಾಜಕೀಯವಾಗಿ ಚುರುಕುಗೊಂಡಿದ್ದಾರೆ.

Advertisement

ಹಜ್‌ ಯಾತ್ರಿಕರಿಗೆ ಬೀಳ್ಕೊಡುಗೆ, ಬಕ್ರೀದ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ, ಕೊಡಗು ಸಂತ್ರಸ್ತರ ಭೇಟಿ, ಸಮುದಾಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಮೂಲಕ ಮತ್ತೆ ರಾಜಕೀಯವಾಗಿಯೂ ಆ್ಯಕ್ಟೀವ್‌ ಆಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಜತೆಗೆ ತಾವು ಭೇಟಿ ನೀಡಿದ ಕಡೆ ಕಾಂಗ್ರೆಸ್‌ನ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಜತೆಗೂಡುತ್ತಿದ್ದು, ಒಂದು ರೀತಿಯಲ್ಲಿ ಶಕ್ತಿ ಪ್ರದರ್ಶನವೂ ಆಗಿದೆ.

ಉದಾಹರಣೆಗೆ ಕೊಡಗು ಸಂತ್ರಸ್ತರ ಭೇಟಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೋದಾಗ ಕಾಂಗ್ರೆಸ್‌ನ ನಾಯಕರು ಜತೆಯಲ್ಲಿ ಹೆಚ್ಚಾಗಿ ಇರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಹೋದಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವ ಎ.ಮಂಜು ಸಹಿತ ಸಾಕಷ್ಟು ನಾಯಕರು ಜತೆಯಲ್ಲಿದ್ದರು.

ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಸಿದ್ದರಾಮಯ್ಯ ಅವರು ಸಮುದಾಯದ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗಲೂ ಕಾಂಗ್ರೆಸ್‌ನ ಶಾಸಕರು ಹಾಗೂ ಸಚಿವರು ತಪ್ಪದೇ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಸಮಯ ಸಿಕ್ಕಾಗಲೆಲ್ಲಾ ನಾನು ಸೋಲಿಗೆ ಎದೆಗುಂದುವುದಿಲ್ಲ, ಕಾಲ ಚಕ್ರ ಉರುಳುತ್ತದೆ ಎಂದು ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ರಾಜ್ಯಾದ್ಯಂತ ಪ್ರಚಾರಕ್ಕೂ ಸಿದ್ಧತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಇತ್ತೀಚಿನ ನಡೆಯ ಹಿಂದೆ ಗುಪ್ತ ಕಾರ್ಯಾಚರಣೆಯ ತಂತ್ರವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಾಯಕತ್ವಕ್ಕೆ ಸಕ್ರಿಯ:
ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರದೇ ನೇತೃತ್ವ ಎಂದು ಈಗಾಗಲೇ ಹೈಕಮಾಂಡ್‌ ಘೋಷಣೆ ಮಾಡಿರುವುದರಿಂದ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನಕ್ಕೂ ತಮಗೆ ಆಪ್ತರಾಗಿರುವ ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ನೇಮಕ ಆಗಿರುವುದರಿಂದ ಕೆಪಿಸಿಸಿ ಸಹ ತಮ್ಮ ನಿಯಂತ್ರಣದಲ್ಲೇ ಇರುವಂತೆ ನೋಡಿಕೊಂಡಿದ್ದಾರೆ.

Advertisement

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಸರ್ಕಾರದಲ್ಲಿ ಇದ್ದರೂ ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರ ರಕ್ಷಣೆಗೆ ನಿಲ್ಲುತ್ತಿಲ್ಲ. ಜೆಡಿಎಸ್‌ ಬಗ್ಗೆ ಮೃಧು ಧೋರಣೆ ತಾಳಿದ್ದಾರೆ ಎಂಬ ಅಪಸ್ವರವೂ ಇದ್ದು, ಆ ರೀತಿ ಅಸಮಾಧಾನಗೊಂಡಿರುವ ಶಾಸಕರನ್ನೂ ಸಿದ್ದರಾಮಯ್ಯ ಸಂಪರ್ಕಿಸಿ ಸಮಾಧಾನಪಡಿಸುವ ಕೆಲಸ ಮಾಡಿ ನಾನು ನಿಮ್ಮ ಜತೆಯಿದ್ದೇನೆ ಎಂದು ಧೈರ್ಯ ತುಂಬುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತರು ಹೇಳುತ್ತಾರೆ. ಅಹಿಂದ ವರ್ಗದ ಶಾಸಕರು ಮಾತ್ರವಲ್ಲದೆ, ಇತರೆ ಸಮುದಾಯದ ಶಾಸಕರೂ ಸಿದ್ದರಾಮಯ್ಯ ಜತೆ ನಿರಂತರ ಸಂಪರ್ಕದಲ್ಲಿದ್ದು  ವರ್ಗಾವಣೆ ಸೇರಿ ಸರ್ಕಾರದ ಏಕಪಕ್ಷೀಯ ತೀರ್ಮಾನಗಳ ವಿಷಯದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

 ಈ ಮಧ್ಯೆ, ಸಿದ್ದರಾಮಯ್ಯ ಅವರು ಸಹ ತಮ್ಮ ರಾಜಕೀಯ ಅನುಭವದ ಆಧಾರದ ಮೇಲೆ ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಚುನಾವಣೆ ಎದುರಿಸಿದರೆ ಎಷ್ಟು ಕ್ಷೇತ್ರ ಗೆಲ್ಲಬಹುದು, ಜೆಡಿಎಸ್‌-ಕಾಂಗ್ರೆಸ್‌ ಜತೆಗೂಡಿದರೆ ಎಷ್ಟು ಕ್ಷೇತ್ರ ಗೆಲ್ಲಬಹುದು. ರಾಜಕೀಯವಾಗಿ ಎರಡೂ ಪಕ್ಷಗಳಿಗೆ ಆಗುವ ಲಾಭ-ನಷ್ಟ ದ ಬಗ್ಗೆ ವರದಿ ತಯಾರಿಸಿದ್ದು ಸದ್ಯದಲ್ಲೇ ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೂ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಸಿದ್ದುಗೆ ಆತಂಕ ಇದೆಯಾ?
ಮತ್ತೂಂದು ಮೂಲಗಳ ಪ್ರಕಾರ  ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಒಂದು ಕಾಲದ ಆಪ್ತ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ನಾನಾ ಸಬೂಬು ಹೇಳಿ ಸಭೆ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಾನು ಸುಮ್ಮನಿದ್ದರೆ ಕಾಂಗ್ರೆಸ್‌ನಲ್ಲಿ ಕಳೆದು ಹೋಗಬಹುದು ಎಂಬ ಆತಂಕ ಸಿದ್ದರಾಮಯ್ಯ ಅವರದ್ದು. ಹೀಗಾಗಿ, ಸರ್ಕಾರದ ಮೇಲೆ ತಮ್ಮ ನಿಯಂತ್ರಣ ಇಲ್ಲದಿದ್ದರೂ ಪಕ್ಷದ ಮೇಲೆ ಹಿಡಿತ ಹೊಂದಲು ಪ್ರವಾಸ, ಸಂಘಟನೆ, ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ನಿಂತ ನೀರಲ್ಲ. ಜನರ ಆಶೀರ್ವಾದ ಇದ್ದಲ್ಲಿ ಮತ್ತೂಮ್ಮೆ ಸಿಎಂ ಆಗುವೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೇಬಾರದು ಎಂದು ವಿರೋಧಿ ಶಕ್ತಿಗಳೆಲ್ಲವೂ ಒಂದಾದವು. ನಾನು ರಾಜಕೀಯದಲ್ಲಿ ಎಂದೂ ಹೆದರಿ ಓಡಿದವನಲ್ಲ. ಬೆನ್ನು ತೋರಿ ಓಡುವುದು ನನ್ನ ಜಾಯಮಾನವಲ್ಲ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next