Advertisement
1997ರಲ್ಲಿ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ನಿವೇಶನ ಖರೀದಿಸಿ, ಕೋಟ್ಯಂತರ ರೂ. ಮೌಲ್ಯದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವಕೀಲರಾದ ಎನ್.ಗಂಗರಾಜು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ಸಿದ್ದರಾಮಯ್ಯ, ಅಂದು ಮುಡಾ ಅಧ್ಯಕ್ಷರಾಗಿದ್ದ ಸಿ.ಬಸವೇಗೌಡ, ಹಾಲಿ ಅಧ್ಯಕ್ಷ ಡಿ.ಧ್ರುವಕುಮಾರ್, ಮುಡಾ ಆಯುಕ್ತ ಕಾಂತರಾಜ್ ವಿರುದ್ಧ ಪ್ರಕರಣ ದಾಖಲಿಸಿ ಜುಲೈ 23ರೊಳಗೆ ವರದಿ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಲಿದೆ.
ವಿಜಯನಗರ ಬಡಾವಣೆ 2ನೇ ಹಂತ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 1988ರಲ್ಲಿ ಹಿನಕಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ 535 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿತ್ತು. ಮುಡಾ ಬಡಾವಣೆ ರಚಿಸಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿದ ಬಳಿಕ ಹಿನಕಲ್ ಗ್ರಾಪಂ ಅಧ್ಯಕ್ಷರಾಗಿದ್ದ ಪಾಪಣ್ಣ, ಚಿಕ್ಕಮ್ಮ, ಸಾಕಮ್ಮ, ಸಹೋದರ ಅಣ್ಣಯ್ಯ, ಪತ್ನಿ ಸುನಂದಾ ಹೆಸರಿಗೆ ಸೇರಿದ 30 ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ 1997ರಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದಾಗ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಆ ವೇಳೆಗೆ ಬಡಾವಣೆ ರಚಿಸಿದ್ದ ಮುಡಾ, ಇವರ ಅರ್ಜಿಗೆ ಮನ್ನಣೆ ನೀಡಿ 30ಗುಂಟೆ ಜಾಗವನ್ನು ಡಿನೋಟಿಪೈ ಮಾಡಲು ಅನುಮತಿ ನೀಡಿ ಎನ್‌ಒಸಿ ನೀಡಿತ್ತು. ಮುಡಾ ಎನ್‌ಒಸಿ ನೀಡಿದ ಕೇವಲ 17 ದಿನಗಳಲ್ಲಿ ಅಂದಿನ ಜಿಲ್ಲಾಧಿಕಾರಿ 30 ಗುಂಟೆ ಜಮೀನಿನ ಭೂ ಪರಿವರ್ತನೆ ಮಾಡಿಕೊಟ್ಟಿದ್ದರು. ಭೂ ಪರಿವರ್ತನೆಯಾದ ಜಾಗದ ಪೈಕಿ 10 ಗುಂಟೆ ಜಾಗವನ್ನು ಸಾಕಮ್ಮ ಹೆಸರಿನಿಂದ ಖರೀದಿ ಮಾಡಿದ ಸಿದ್ದರಾಮಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆಯನ್ನು ಉಲ್ಲಂ ಸಿ ಹಿನಕಲ್ ಗ್ರಾಮ ಪಂಚಾಯ್ತಿಯಲ್ಲಿ ಖಾತೆ ಮಾಡಿಸಿಕೊಂಡು, ಮುಡಾದಿಂದ ಕಟ್ಟಡ ನಿರ್ಮಾಣದ ನಕ್ಷೆ ಅನುಮೋದನೆ ಪಡೆದು ಮನೆ ನಿರ್ಮಿಸಿದ್ದರು.
Related Articles
Advertisement
ಆದರೆ, 36 ವರ್ಷಗಳ ನಂತರ ಸಾಕಮ್ಮ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದಾಗ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಕೆಲ ದಿನಗಳ ಹಿಂದೆ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ 60-40 ನಿವೇಶನ ಮಂಜೂರು ಮಾಡಲಾಗಿದೆ. ಸಾಕಮ್ಮ ಹೆಸರಿನ 10ಗುಂಟೆ ಜಾಗವನ್ನು ಸಿದ್ದರಾಮಯ್ಯ ಅವರು ಖರೀದಿಸಿರುವಾಗ ಬದಲಿ ನಿವೇಶನ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿ, ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅರ್ಜಿ ಸಲ್ಲಿಸಲು 2018ರ ಏಪ್ರಿಲ್ 23ರಂದು ರಾಜ್ಯಪಾಲರ ಅನುಮತಿ ಕೋರಲಾಯಿತು. ಮೇ ತಿಂಗಳಲ್ಲಿ ತಮಗೆ ರಾಜ್ಯಪಾಲರ ಕಚೇರಿಯಿಂದ ಪತ್ರ ಬಂದಿದ್ದು, ಈ ಪ್ರಕರಣದಲ್ಲಿ ದೂರು ನೀಡಲು ತಮ್ಮ ಅನುಮತಿ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದರಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿ, ಜುಲೈ 23ರೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ ಎಂದು ವಕೀಲ ಎನ್.ಗಂಗರಾಜ್ ತಿಳಿಸಿದ್ದಾರೆ.