Advertisement
ಶುಕ್ರವಾರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ಮೇಲಾಟವೇ ಬಿರುಸಾಗಿತ್ತು. ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದರು. ಅತ್ತ ರಾಯಚೂರಿನಲ್ಲಿ ನಡೆದ ಪಂಚತಂತ್ರ ರಥಯಾತ್ರೆ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಉಭಯ ನಾಯಕರ ವಿರುದ್ಧ ಕಿಡಿಕಾರಿದರು.
ರಾಜ್ಯದ ಇತರ ಭಾಗಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಜೆಡಿಎಸ್ ನಾಯಕರನ್ನು ಗುರಿ ಮಾಡಿಕೊಂಡರು. ಕಳೆದ ಬಾರಿ ಎಚ್.ಡಿ. ಕುಮಾರಸ್ವಾಮಿಗೆ ಅಧಿಕಾರ ನೀಡಿದರೆ ಆತನಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೈತ್ರಿ ಸರಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ನಿಮ್ಮ ಪಕ್ಷದ ಮೂರು ಜನ ಶಾಸಕರು ಬಿಜೆಪಿಗೆ ಹೋದರಲ್ಲ; ಅವರನ್ನು ನಾನು ಕಳಿಸಿದ್ದೆನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಕುಮಾರಸ್ವಾಮಿ ಹೋಟೆಲ್‌ನಲ್ಲಿ ಕುಳಿತುಕೊಂಡು ಅಧಿಕಾರ ನಡೆಸಿದರೆ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಜನರ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಇದು ಕುಮಾರಸ್ವಾಮಿಯ ತಪ್ಪು ಎಂದರು. ಒಂದು ಅವಕಾಶ ನೀಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಜೆಡಿಎಸ್ ಅನ್ನು ತರಾಟೆಗೆ ತೆಗೆದುಕೊಂಡರು. 2018ರಲ್ಲಿ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಕುಮಾರಸ್ವಾಮಿಗೆ ಬೆಂಬಲ ಕೊಟ್ಟಿದ್ದೆವು. ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ಜೆಡಿಎಸ್‌ಗೆ ಕಾಂಗ್ರೆಸ್ ಮೋಸ ಮಾಡಿಲ್ಲ. ಅವರೇ ಕಾಂಗ್ರೆಸ್‌ಗೆ ಮೋಸ ಮಾಡಿದ್ದು. ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ಅವರೂ ಜನರ ಮನಸ್ಸು ಗೆಲ್ಲಲಿಲ್ಲ. ಆದ್ದರಿಂದ ನನಗೆ ಶಕ್ತಿ ನೀಡಿ. ನಿಮ್ಮ ಸೇವೆ ಮಾಡಲು ನಮಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಒಕ್ಕಲಿಗರೇ ಹೆಚ್ಚು ಪ್ರಾಬಲ್ಯವಿರುವ ಮಂಡ್ಯ ನೆಲದಲ್ಲೇ ನಿಂತು ಡಿಕೆಶಿ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದು ವಿಶೇಷ.
Related Articles
ರಾಯಚೂರಿನಲ್ಲಿ ಇದಕ್ಕೆ ತಿರುಗೇಟು ಕೊಟ್ಟ ಎಚ್.ಡಿ. ಕುಮಾರಸ್ವಾಮಿ, ಆಗ ಕಾಂಗ್ರೆಸ್‌ನವರು ಷರತ್ತುರಹಿತ ಬೆಂಬಲ ನೀಡಿರಲಿಲ್ಲ. ಒಬ್ಬ ಮುಖ್ಯಮಂತ್ರಿಯನ್ನು ಗುಲಾಮ ನಂತೆ ನಡೆಸಿಕೊಂಡರು ಎಂದು ಕಿಡಿಕಾರಿದರು. ಆಗ ನನ್ನನ್ನು ಸಿಎಂ ಮಾಡಿ ಸ್ಲೋ ಪಾಯಿಸನ್ ಕೊಟ್ಟಿದ್ದರು ಎಂದು ಎಚ್‌ಡಿಕೆ ಹೇಳಿದರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ಧವೇ ಆಗುತ್ತದೆ. ಅವರಪ್ಪನ ಆಣೆ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದಿದ್ದರು. ನಾನು ಸಿಎಂ ಆದೆ. ಬಿಎಸ್‌ವೈ ಕೂಡ ಸಿಎಂ ಆದರು. ನಾನು ಹೋಟೆಲ್‌ನಲ್ಲಿ ಇದ್ದುಕೊಂಡೇ ಆಡಳಿತ ನಡೆಸಿದೆ ಎನ್ನುವ ಕಾಂಗ್ರೆಸ್‌ನವರು 78 ಸ್ಥಾನ ಹೊಂದಿದ್ದರೂ ಸರಕಾರಿ ಬಂಗಲೆ ಬಿಟ್ಟು ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement