ಬೆಳಗಾವಿ: ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಅಲ್ಲಿ ಜಂಗಲ್ ರಾಜ್ಯವಿದೆ. ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಳಗಾವಿ ವಿಮಾನ ನಿಲ್ದಾಣ ದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂತ್ರಸ್ತ ಹೆಣ್ಣು ಮಗಳ ಮನೆಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಪೊಲೀಸರು ಬಿಡಲಿಲ್ಲ.ಈ ದೇಶ ಬಿಜೆಪಿಯ ಆಸ್ತಿಯೂ ಅಲ್ಲ, ಯೋಗಿ ಆದಿತ್ಯನಾಥ್ ಆಸ್ತಿಯೂ ಅಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸರು ರಾಹುಲ್ ಗಾಂಧಿಯವರನ್ನು ತಡೆದ್ದಾರೆ. ಯೋಗಿ ಆದಿತ್ಯನಾಥ್ ಗೆ ಸಿಎಂ ಆಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಲಿ. ಆತ “ಯೋಗಿನೋ ರೋಗಿನೋ” ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ 203 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್!
ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಈ ಬಾರಿ ಪ್ರವಾಹ ಬಂದಾಗ ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ. ಕೋವಿಡ್ ನಿಯಂತ್ರಣ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ. ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಹಗರಣ ಆಗಿದೆ. ನಾಲ್ಕು ಸಾವಿರ ಕೋಟಿಯಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಅಧಿಕಾರ ನಡೆಸಿದ್ದರು ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ನಳೀನ್ ಕುಮಾರ್ ಕಟೀಲ್ ಯಕಶ್ಚಿತ್ ರಾಜಕಾರಣಿ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ ಎಂದು ತಿರುಗೇಟು ನೀಡಿದರು.