Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಅನುಮಾನ

02:53 PM Mar 29, 2018 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದೇ ಅನುಮಾನ, ಇನ್ನು ಗೆಲ್ಲುವುದೆಲ್ಲಿಂದ ಬಂತು. ಮೊದಲು ನಾಮಪತ್ರ ಸಲ್ಲಿಸಲಿ, ಜೆಡಿಎಸ್‌ ಕಾರ್ಯಕರ್ತರು ತಮ್ಮ ಶಕ್ತಿ ತೋರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

Advertisement

ಬುಧವಾರ ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ಸುಮಾರು ಅರ್ಧ ಗಂಟೆಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸೋಲು ಖಚಿತ. ಹೀಗಾಗಿ ಚುನಾವಣಾ ಫ‌ಲಿತಾಂಶದ ದಿನ ಮೈಸೂರಿಗೆ ಬಂದು ಮಾಧ್ಯಮಗಳ ಜತೆಗೆ ಸಿದ್ದರಾಮಯ್ಯ ಸೋತ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ ಎಂದು ಲೇವಡಿ ಮಾಡಿದರು.

ಸಮಾವೇಶಕ್ಕೆ ಜನ ಬೆಂಬಲ: ಚಾಮುಂಡೇಶ್ವರಿ ಕ್ಷೇತ್ರದಿಂದಲೇ ತಾವು ಕುಮಾರಪರ್ವ ಆರಂಭಿಸಿದ್ದು, ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಚುನಾವಣೆ ಘೋಷಣೆ ನಂತರ ಮೈಸೂರು ನಗರದ ಕೃಷ್ಣರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ನಡೆದ ಕುಮಾರಪರ್ವ ಸಮಾವೇಶಕ್ಕೂ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳನ್ನು ತಾವು ಗುರಿಯಾಗಿಸಿಕೊಂಡಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದ ಮತದಾರರು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲಿದ್ದು, ಜೆಡಿಎಸ್‌ ಬೆಂಬಲಿಸಲಿದ್ದಾರೆ ಎಂದರು.

ಫ‌ಲ ಕೊಡಲ್ಲ: ಸಿ-ಪೋರ್‌ ಸಮೀಕ್ಷೆಯನ್ನು ರಾಜ್ಯದ ಜನತೆ ಬುಡಮೇಲು ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸದಾ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಮುಂದೆ ಸುತ್ತುವ ಸಿ-ಪೋರ್‌ ಸಂಸ್ಥೆ ಮಾಲೀಕನಿಂದ ಇನ್ಯಾವ ರೀತಿಯ ಸಮೀಕ್ಷೆ ನಿರೀಕ್ಷಿಸಲು ಸಾಧ್ಯ ಎಂದು ಹೇಳಿದ ಅವರು, ಸಿ-ಪೋರ್‌ ಸಮೀಕ್ಷೆ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಆದರೆ, ಇಂತಹ ಸಮೀಕ್ಷೆಗಳು ಸಿದ್ದರಾಮಯ್ಯ ಅವರಿಗೆ ಫ‌ಲ ಕೊಡಲ್ಲ ಎಂದರು.

ಕೆಂಪಯ್ಯ ಮೇಲೆ ಕಣ್ಣಿಡಲು ದೂರು: ಮತದಾರರಿಗೆ ಹಣ ನೀಡಿ ಎಲ್ಲಿ ಬೇಕಾದರೂ ನಿಂತು ಗೆಲ್ಲಬಹುದು ಎಂದುಕೊಂಡಿದ್ದಾರೆ ಸಿದರಾಮಯ್ಯ. ಅದಕ್ಕಾಗಿ ಒಂದು ವೋಟಿಗೆ 500, ಸಾವಿರ ರೂ. ಕೊಡಲು ಕೆಂಪಯ್ಯ ನೇತೃತ್ವದಲ್ಲಿ ತಯಾರಿ ನಡೆದಿದೆ. ಹೀಗಾಗಿ ಕೆಂಪಯ್ಯ ಮೇಲೆ ಕಣ್ಣಿಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

Advertisement

ಚುನಾವಣೆ ಎದುರಾದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಗೆ ಈಗ ತೆಂಗು- ಅಡಕೆ ಬೆಳೆಗಾರರ ನೆನಪಾಗಿದೆ. ಯಡಿಯೂರಪ್ಪದೇಶದ ನಂಬರ್‌ ಒನ್‌ ಮುಖ್ಯಮಂತ್ರಿ ಎನ್ನುವ ಮೂಲಕ ಅಮಿತ್‌ ಶಾ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು. ಕ್ಷೀರಭಾಗ್ಯದ ಪ್ರಚಾರ ಫ‌ಲಕದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಶಾಲಾ ಮಕ್ಕಳು ಕಲ್ಲು ಹೊಡೆಯುವ ಸ್ಥಿತಿ ಬಂದಿದೆ. ಇನ್ನು ಎದುರಿಗೆ ಸಿಕ್ಕರೆ ಏನು ಗತಿ ಮಾಡುತ್ತಾರೋ ಎಂದರು.

ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ: ಮುಂದಿನ ವಾರ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಿದ್ದು, ಈ ಪಟ್ಟಿಯಲ್ಲಿ ನನ್ನ ಹೆಸರೂ ಇರಲಿದೆ. ನನ್ನ ಕರ್ಮಭೂಮಿ ರಾಮನಗರ ಕ್ಷೇತ್ರದ ಜತೆಗೆ ಈ ಬಾರಿ ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಪಕ್ಷದೊಳಗೆ ಚರ್ಚಿಸಿ ಯಾವ ಕ್ಷೇತ್ರ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್‌.ವಿಶ್ವನಾಥ್‌, ಶಾಸಕ ಸಾ.ರಾ.ಮಹೇಶ್‌, ವರುಣಾ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್‌, ಕೆ.ಆರ್‌.ಕ್ಷೇತ್ರದ ಅಭ್ಯರ್ಥಿ ಕೆ.ವಿ.ಮಲ್ಲೇಶ್‌ ಜತೆಗಿದ್ದರು.

2013ರ ಚುನಾವಣೆಯಲ್ಲಿ ನಾವು ಸ್ವಲ್ಪ ಎಡವಿದ್ದರಿಂದ ಕಡಿಮೆ ಸ್ಥಾನ ಗೆಲ್ಲುವಂತಾಯಿತು. ಈ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದು, ಮಂಡ್ಯ, ಹಾಸನದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನ ಬೆಂಬಲ ಸಿಗಲ್ಲ. ಹೀಗಾಗಿ ಜೆಡಿಎಸ್‌ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಅಣಕಿಸಿದ್ದಾರಲ್ಲಾ, ಅಷ್ಟು ಸ್ಥಾನಗಳನ್ನು ಈ ಭಾಗದಲ್ಲೇ ಗೆದ್ದು ತೋರಿಸುತ್ತೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ 

Advertisement

Udayavani is now on Telegram. Click here to join our channel and stay updated with the latest news.

Next