ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು(ಜ.8) ತಾವು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಆಪ್ತ ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಆ ಬಳಿಕ ನೇರವಾಗಿ ಕೋಲಾರಕ್ಕೆ ತೆರಳಲಿದ್ದಾರೆ. ಆ ಬಳಿಕ ಅಲ್ಲಿನ ಸ್ಥಳೀಯ ಮುಖಂಡರ ಜತೆ ಸೇರಿ ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಕೋಲಾರ ಅಥವಾ ವರುಣಾ ಪೈಕಿ ಒಂದು ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ವರುಣಾ ಕ್ಷೇತ್ರ ತ್ಯಾಗಕ್ಕೆ ಅವರ ಪುತ್ರ ಕೂಡಾ ತಯಾರಾಗಿದ್ದರು. ಆದರೆ ಪುತ್ರನ ರಾಜಕೀಯ ಪಯಣಕ್ಕೆ ಅಲ್ಪ ವಿರಾಮ ಹಾಕಲು ಒಪ್ಪದ ಸಿದ್ದರಾಮಯ್ಯ, ಕೋಲಾರದಿಂದಲೇ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.
ಕೋಲಾರವು ಕೂಡಾ ಸಿದ್ದರಾಮಯ್ಯ ಅವರಿಗೆ ಸುಲಭದ ತುತ್ತಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ ನಲ್ಲಿ ಬಣ ಜಗಳ ಒಂದು ಕಡೆಯಾದರೆ , ಇನ್ನೊಂದೆಡೆ ಜೆಡಿಎಸ್ ಪ್ರಬಲವಾಗಿದೆ. ಜತೆಗೆ ಈಗಾಗಲೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುವ ವರ್ತೂರು ಪ್ರಕಾಶ್ ತನ್ನದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಈ ಎಲ್ಲ ಸವಾಲುಗಳನ್ನು ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ? ಎಂಬ ಕುತೂಹಲವೂ ಸೃಷ್ಟಿಯಾಗಿದೆ.