Advertisement

ಪಕ್ಷ ಸಂಘಟನೆಗೆ ಸಿದ್ದರಾಮಯ್ಯ ಕರೆ

11:10 AM Jan 10, 2018 | Team Udayavani |

ಉಡುಪಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 

Advertisement

ಸೋಮವಾರ ರಾತ್ರಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಅವರು, ಚುನಾವಣೆ ವೇಳೆ ಕಡಿಮೆ ಮತ ಬಿದ್ದಲ್ಲಿ ಆಯಾ ಬೂತ್‌ನಲ್ಲಿ ಯಾಕಾಗಿ ಮತ ಕಡಿಮೆಯಾಯಿತು ಎಂದು ವಿಮರ್ಶೆ ಮಾಡಬೇಕು. ಬಿಜೆಪಿಯವರ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು. ವಾಸಸ್ಥಾನದಲ್ಲಿ ಇಲ್ಲ ಎಂಬ ಕಾರಣ ಒಡ್ಡಿ ಬಿಜೆಪಿಯವರು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಿಸುತ್ತಾರೆ. ನಮ್ಮ ಕಾರ್ಯಕರ್ತರು ಜಾಗರೂಕತೆಯಿಂದ ಗಮನಿಸಬೇಕು. ಮತದಾರ ರನ್ನು ನೋಂದಾಯಿಸುವ ಕೆಲಸವನ್ನು ಈಗಿಂದೀಗಲೇ ಆರಂಭಿಸಬೇಕು ಎಂದರು.

ಎಐಸಿಸಿ ಪ್ರ.ಕಾರ್ಯದರ್ಶಿ ಆಸ್ಕರ್‌ ಫೆರ್ನಾಂಡಿಸ್‌, ಬ್ಲೋಸಂ ಫೆರ್ನಾಂಡಿಸ್‌, ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಸಚಿವ ಪ್ರಮೋದ್‌ ಮಧ್ವರಾಜ್‌, ಶಾಸಕರಾದ ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್‌, ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಭಂಡಾರಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ನಾಯಕರಾದ ಮುರಳಿ ಶೆಟ್ಟಿ, ದಿನೇಶ ಪುತ್ರನ್‌, ಸತೀಶ್‌ ಅಮೀನ್‌ ಪಡುಕರೆ, ಅಶೋಕಕುಮಾರ ಕೊಡವೂರು ಉಪಸ್ಥಿತರಿದ್ದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. 

ಸಿಎಂ ನಿರ್ಗಮನ
ಸೋಮವಾರ ರಾತ್ರಿ ಸಚಿವ ಪ್ರಮೋದ್‌ ಮಧ್ವರಾಜರ ನಿವಾಸದಲ್ಲಿ ತಂಗಿದ್ದ ಮುಖ್ಯಮಂತ್ರಿಗಳು ಮಂಗಳವಾರ ಬೆಳಗ್ಗೆ ಕೊಡಗು ಜಿಲ್ಲಾ ಪ್ರವಾಸಕ್ಕೆ ನಿರ್ಗಮಿಸಿದರು. ಸೋಮವಾರ ಮಧ್ಯಾಹ್ನ ಮತ್ತು ರಾತ್ರಿ ಭೋಜನ ಹಾಗೂ ಮಂಗಳವಾರ ಉಪಾ ಹಾರವನ್ನು ಸಿದ್ದರಾಮಯ್ಯ ಅವರು ಪ್ರಮೋದ್‌ ಮನೆಯಲ್ಲೇ ಸೇವಿಸಿದರು. ಸುಮಾರು 10.30ಕ್ಕೆ ಮಡಿಕೇರಿಗೆ ನಿರ್ಗಮಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಸೋಮವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next