Advertisement

ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ ನ್ಯಾಯಯುತ ಅನುದಾನಕ್ಕೆ ಸಿದ್ದರಾಮಯ್ಯ ಆಗ್ರಹ

08:17 PM Feb 28, 2022 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಜೆಟ್‌ನಲ್ಲಿ ನ್ಯಾಯಯುತ ಅನುದಾನ ಒದಗಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಸಮಾಜದ ಅಂಚಿನಲ್ಲಿರುವ ಜನರ ಕಲ್ಯಾಣ ಸಾಧ್ಯವಾಗದೆ ಯಾವುದೆ ರಾಜ್ಯವಾಗಲಿ, ಯಾವುದೆ ದೇಶವಾಗಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಅರ್ಥ ಮಾಡಿಕೊಂಡು ಈ ವರ್ಷದ ಬಜೆಟ್‌ನಲ್ಲಿ ನ್ಯಾಯಯುತವಾಗಿ ಅನುದಾನಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

2011 ರ ಜನಗಣತಿಯಂತೆ ಶೇ.24.1 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ನಮ್ಮ ರಾಜ್ಯದಲ್ಲಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಕಾಲು ಭಾಗದಷ್ಟಿರುವ ಈ ದಮನಿತ ವರ್ಗಗಳ ಕಲ್ಯಾಣಕ್ಕಾಗಿ 2013 ರಲ್ಲಿ ನಮ್ಮ ಸರ್ಕಾರ ಇದ್ದಾಗ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ ಜಾರಿಗೆ ತಂದು ಜನಸಂಖ್ಯೆಗನುಗುಣವಾಗಿ ಅನುದಾನ ಒದಗಿಸಿ, ಅದೇ ವರ್ಷ ಖರ್ಚು ಮಾಡುವ ಶಾಸನಬದ್ಧ ಅನಿವಾರ್ಯತೆ ಈ ಕಾನೂನಿನ ಮೂಲಕ ರೂಪಿಸಿದೆವು.

ಈ ಕಾನೂನು ಜಾರಿಗೆ ತಂದದ್ದರ ಪರಿಣಾಮವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಉದ್ಯೋಗ, ವಾಸಿಸುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ, ಕೃಷಿಕರಿಗೆ ನೆರವು, ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ಉತ್ತೇಜನ ಮುಂತಾದ ಯೋಜನೆಗಳು ಸಮರ್ಥವಾಗಿ ಜಾರಿಯಾಗಿದ್ದವು ಎಂದು ಹೇಳಿದ್ದಾರೆ.

ಶಿಕ್ಷಣದ ವಿಚಾರದಲ್ಲಿ ನಮ್ಮ ಸರ್ಕಾರ ಸಾಕಷ್ಟು ಆಸ್ಥೆ ವಹಿಸಿತ್ತು. ನಮ್ಮ ಅವಧಿಯಲ್ಲಿ 2013 ರಿಂದ 2017-18 ರವರೆಗೆ ಸುಮಾರು 1100 ವಸತಿ ಶಾಲೆಗಳನ್ನು ಹಾಗೂ ಹಾಸ್ಟೆಲ್‌ಗ‌ಳನ್ನು ಪ್ರಾರಂಭಿಸಿದೆವು. 2012-13 ರಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಊಟದ ವೆಚ್ಚವನ್ನು ತಿಂಗಳಿಗೆ ರೂ.750 ಗಳನ್ನು ನೀಡಲಾಗುತ್ತಿತ್ತು, ಅದನ್ನು ನಾವು ರೂ.1500 ಗಳವರೆಗೆ ಏರಿಸಿದ್ದೆವು. ಇದರಿಂದಾಗಿ 3 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ಅನುಕೂಲವಾಯಿತು. ವಿದ್ಯಾರ್ಥಿ ವೇತನವನ್ನು ಕನಿಷ್ಠ ರೂ.400 ಗಳಿಂದ ರೂ.1100 ಗಳವರೆಗೆ ಏರಿಸಿದ್ದೆವು.ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ವಿಚಾರಗಳನ್ನು ಕಡೆಗಣಿಸಿದೆ ಎಂದು ದೂರಿದ್ದಾರೆ.

Advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಿಗೆ ಬಿಡುಗಡೆ ಮಾಡುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ 5000 ಕೋಟಿ ರೂ. ಅನುದಾನ ಒದಗಿಸುತ್ತಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2020-21 ರಲ್ಲಿ 3119 ಕೋಟಿ ಮತ್ತು 2021-22 ರಲ್ಲಿ 3762 ಕೋಟಿ ರೂ. ಮಾತ್ರ ಒದಗಿಸಿದೆ. ಹಾಗೆಯೆ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ 1650 ಕೋಟಿ ರೂ. ಅನುದಾನವನ್ನು ಒದಗಿಸುತ್ತಿದ್ದೆವು. ಈಗ 1350 ಕೋಟಿಗಳಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next