ಬೇಲೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಇತ್ತೀಚಿನ ದಿನದಲ್ಲಿ ಕ್ಷೇತ್ರದ ನೆಲೆ ಇಲ್ಲದೆ ಅಲೆಮಾರಿ ರೀತಿಯಲ್ಲಿ ಅಲೆಯುತ್ತಿದ್ದು ನಾನು ಅನಾರೋಗ್ಯದಿಂದ ಬಾದಾಮಿ ಪ್ರಚಾರಕ್ಕೆ ತೆರಳಲು ಸಾಧ್ಯವಾಗಿಲ್ಲ, ಒಂದು ವೇಳೆ ಬಾದಾಮಿಯಲ್ಲಿ ಎರಡು ಗಂಟೆ ಪ್ರಚಾರ ನಡೆಸಿದ್ದರೆ ಖಚಿತವಾಗಿ ಸಿದ್ದರಾಮಯ್ಯ ಸೋಲುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯನವರ ವಿರುದ್ಧ ವಾಗ್ಧಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಸಿದ್ದರಾಮಯ್ಯ ಯಾವುದೇ ದಾಖಲೆ ಪತ್ರಗಳು ಇಲ್ಲದೆ ರಾಜ್ಯ ಸರ್ಕಾರವನ್ನು ಕಮಿಷನ್ ಸರ್ಕಾರವೆಂದು ಟೀಕೆ ಮಾಡುವುದು ಅವರಿಗ ಶೋಭೆ ತರುವುದಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷದವರು ಇತ್ತೀಚಿನ ದಿನದಲ್ಲಿ ತೀವ್ರ ಹತಾಶೆ ಮನೋಭಾವನೆಯಿಂದ ಪೇಸಿಎಂ ಎಂಬ ಪೋಸ್ಟರ್ ಗೋಡೆ ಗೋಡೆಗೆ ಅಂಟಿಸುತ್ತಿರುವುದು ತೀರ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ದೇಶದಲ್ಲಿ ಕಾಂಗ್ರೆಸ್ ನೆಲೆ ಇಲ್ಲದೆ ಹಾಗೂ ನಾಯಕರು ಇಲ್ಲದೆ ಮೋದಿ ಆಡಳಿತ ಮುಂದೆ ಧೂಳಿಪಟವಾಗಿದ್ದಾರೆ. ಮೋದಿಗೆ ಸರಿಸಮನಾಗಿ ನಿಲ್ಲುವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದೆ ಭಾರತ ಜೋಡೋ ಯಾತ್ರೆ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸರ್ಕಾರ ಉತ್ತಮ ಬಜೆಟ್ ಹಾಗೂ ಜನಪರ ಆಡಳಿತ ನೀಡುತ್ತಿದೆ, ಈ ಆದಾರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಅಧಿಕ ಸ್ಥಾನ ಗಳಿಸಲಿದೆ ರಾಜ್ಯದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಬಿಜೆಪಿ ಮುಖಂಡರಾದ ಕೊರಟಿಕೆರೆ ಪ್ರಕಾಶ್, ಸುರಭಿ ರಘು, ರೇಣುಕುಮಾರ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹಾಜರಿದ್ದರು.