ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ವಿರುದ್ಧ 1977ರಿಂದಲೂ ನಾನು ಮಾತನಾಡುತ್ತಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್‌ಎಸ್‌ಎಸ್ ವಿರುದ್ಧ ಮಾತನಾಡುವುದು ಬೆಂಕಿ ಜತೆಗೆ ಸರಸವಾಡಿದಂತೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1977ರಿಂದಲೂ ಆರ್ ಎಸ್ ಎಸ್ ಮಾತನಾಡುತ್ತಾ ಬಂದಿರುವೆ. ಮೊದಲಿಂದಲೂ ಸಂಘ ಪರಿವಾರದ ನೀತಿಗಳ ವಿರುದ್ಧ ನಾನು ಮಾತನಾಡುತ್ತಿದ್ದೇನೆ ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವು ಆರ್ ಎಸ್ ಎಸ್ ವಿರುದ್ಧ ದಾಖಲೆ ಸಮೇತ ಮಾತನಾಡುತ್ತಿದ್ದೇನೆ ಎಂಬ ಹೇಳಿಕೆಗೆ ಸಿದ್ದರಾಮಯ್ಯ, ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದರು.
ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಾವು ಬಯಸಿರಲಿಲ್ಲ. ಆದರೆ, ಆ ಕ್ಷೇತ್ರಗಳ ಶಾಸಕರಾಗಿದ್ದ ಎಂ.ಸಿ. ಮನಗೂಳಿ, ಸಿ.ಎಂ. ಉದಾಸಿ ಅವರ ನಿಧನದಿಂದ ಉಪಚುನಾವಣೆ ಎದುರಾಗಿದೆ ಎಂದು ಅವರು ಹೇಳಿದರು.
ಒಮ್ಮತದಿಂದ ಹಾನಗಲ್ ಮತ್ತು ಸಿಂದಗಿ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತದಿಂದ ಜನ ಭ್ರಮನಿರಸಗೊಂಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.