ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರೂಪಾಯಿ ಲಂಚವನ್ನು ದೇಣಿಗೆ ರೂಪದಲ್ಲಿ ನೀಡಿರುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗಂಭೀರ ಆರೋಪದ ಬಗ್ಗೆ ಟಿವಿ9 ವರದಿ ಮಾಡಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರು ಸಿಎಂ ಮೌನಕ್ಕೆ ಶರಣಾಗಿದ್ದಾರೆ ಎಂದು ಶುಕ್ರವಾರ ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿದೆ ಎಂದು ತಿಳಿಸಿದ್ದಾರೆ.
ಎಂಎಲ್ ಸಿ ಗೋವಿಂದರಾಜು ಸಿದ್ದರಾಮಯ್ಯ ಅವರ ಬಲಗೈ ಬಂಟ, ಗೋವಿಂದ ರಾಜು ಮನೆಯಲ್ಲಿ ದಾಖಲೆ ಇರುವ ಡೈರಿ ಸಿಕ್ಕಿದೆ. ಸಿಎಂ ಅವರೇ ಗೋವಿಂದರಾಜು ಮೂಲಕ ಹಣ ಕೊಟ್ಟ ದಾಖಲೆ ಸಿಕ್ಕಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಸಿಎಂ ರಾಜ್ಯದ ಜನತೆಗೆ ಸತ್ಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ದಾಖಲೆ ನೀಡಿ, ಇಲ್ಲಾ ರಾಜೀನಾಮೆ ಕೊಡಿ: ಸಿದ್ದರಾಮಯ್ಯ ಸವಾಲು
ಕಾಂಗ್ರೆಸ್ ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಲಂಚ ನೀಡಿರುವುದಾಗಿ ಆರೋಪಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಬಗ್ಗೆ ದಾಖಲೆ ನೀಡಲಿ, ಇಲ್ಲಾಂದರೆ ರಾಜೀನಾಮೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ, ಟಿಬಿ ಜಯಚಂದ್ರ ಸೇರಿದಂತೆ ಹಲವರು ಬಿಎಸ್ ಯಡಿಯೂರಪ್ಪ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರೋ ಅಥವಾ ಇಡಿ(ಜಾರಿ ನಿರ್ದೇಶನಾಲಯದ) ವಕ್ತಾರರೋ ಎಂದು ಪ್ರಶ್ನಿಸಿದ್ದಾರೆ.