ಸೊಲ್ಲಾಪುರ: ಶ್ರಾವಣ ಮಾಸದ ಮೊದಲ ಸೋಮವಾರ ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮನ ದರ್ಶನಕ್ಕೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ತೆಲಾಂಗಣದ ಭಕ್ತ ಸಾಗರವೇ ಹರಿದು ಬಂದಿತ್ತು. ಸೊಲ್ಲಾಪುರದ ಗ್ರಾಮ ದೇವರು ಶ್ರೀ ಸಿದ್ಧರಾಮೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ದರ್ಶನಕ್ಕಾಗಿ ಮಂದಿರದಲ್ಲಿ ನಸುಕಿನ ಜಾವದಲ್ಲಿಯೇ ಹೆಣ್ಣು ಮಕ್ಕಳು ಸಾಲು ಸಾಲಾಗಿ ನೆರದಿದ್ದರು.
ಭಕ್ತಿ-ಶಕ್ತಿ ಜಾಗೃತವಾಗುವ ಈ ತಿಂಗಳಲ್ಲಿ ಮೊದಲ ಸೋಮವಾರದಂದು ಸಿದ್ಧರಾಮನಿಗೆ ಎಲೆ ಪೂಜೆ ಮಾಡಲಾಯಿತ್ತು. ಬೆಳಗ್ಗೆ ಕಾಕಡಾರತಿ, ಸಿದ್ಧರಾಮೇಶ್ವರ ಮೂರ್ತಿಗೆ ರುದ್ರಾಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ಕಾರ್ಯಕ್ರಮಗಳು ಆರಂಭವಾದವು.
ಶರಣ ಸಿದ್ಧರಾಮರ ಯೋಗ ಸಮಾಧಿಗೆ ಬಣ್ಣ-ಬಣ್ಣದ ಹೂವಿನ ಅಲಂಕಾರ ಮಾಡಲಾಗಿತ್ತು. ನಂತರ ಯೋಗ ಸಮಾಧಿಗೆ ರುದ್ರಾಭಿಷೇಕ, ಮಂತ್ರ ಘೋಷಣೆ, ಸಹಸ್ರ ಬಿಲ್ವಾರ್ಚನೆ, ಮಹಾಆರುತಿ ನೆರವೇರಿತು. ತದನಂತರ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ಮೂರು ಬಾರಿ ಮಹಾಆರುತಿ ಮಾಡಲಾಯಿತು. ಇಡೀ ದಿನ ಮಂದಿರದಲ್ಲಿ ಪಾರಾಯಣ, ಶಿವಪಾಠ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಗರ ಸೇರಿದಂತೆ ದೂರದ ಭಕ್ತರು ಕಾಲ್ನಡಿಗೆಯಿಂದ ಮಂದಿರಕ್ಕೆ ಬರುತ್ತಿದ್ದರು. ಸಿದ್ಧೇಶ್ವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಮಹಾಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಸಿದ್ಧರಾಮನ ಆರಾಧ್ಯ ದೈವ ಬಾಳಿವೇಸ್ ದಲ್ಲಿರುವ ಮಲ್ಲಿಕಾರ್ಜುನ ಮಂದಿರದಲ್ಲಿಯೂ ರುದ್ರಾಭಿಷೇಕ, ಮಹಾಆರುತಿ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿಜಯಪುರ ರಸ್ತೆಯಲ್ಲಿರುವ ರೇವಣಸಿದ್ಧೇಶ್ವರ ಮಂದಿರದಲ್ಲಿಯೂ ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆದವ.