Advertisement

ಆಜ್ರಿ: ಆರೋಗ್ಯ ಉಪ ಕೇಂದ್ರದಲ್ಲಿ ವೈದ್ಯರೂ ಇಲ್ಲ, ಸಿಬಂದಿಯೂ ಇಲ್ಲ

06:00 AM May 25, 2018 | Team Udayavani |

ಕುಂದಾಪುರ: ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಆಜ್ರಿ ಆರೋಗ್ಯ ಉಪ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರಂತೂ ಮೊದಲೇ ಇಲ್ಲ. ಹಿರಿಯ ನರ್ಸ್‌, ಸಹಾಯಕ ನರ್ಸ್‌ ಸೇರಿದಂತೆ ಸಹಾಯಕ ಸಿಬಂದಿಯೂ ಇಲ್ಲದೆ ಬೀಗ ಹಾಕಲಾಗಿದೆ. 
  
8 ತಿಂಗಳಿಂದ ಬೀಗ 
ಆಜ್ರಿಹರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 4,800 ಕ್ಕೂ ಹೆಚ್ಚು ಮಂದಿ ವಾಸವಾಗಿದ್ದು, ಇಲ್ಲಿನ ಜನರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆಯೇ ಇಲ್ಲಿ ಆರೋಗ್ಯ ಉಪ ಕೇಂದ್ರ ತೆರೆಯಲಾಗಿತ್ತು. ಆದರೆ ಇದರಿಂದ ಈವರೆಗೆ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಇಲ್ಲಿ ಈ ಮೊದಲು ಒಬ್ಬ ನರ್ಸ್‌ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರಿಗೆ ಇಲ್ಲಿಂದ ವರ್ಗಾವಣೆಯಾಗಿ ಬೇರೆಡೆ ಹೋಗಿ 8 ತಿಂಗಳಾಗಿದ್ದು, ಆ ಬಳಿಕ ಬೀಗ ಹಾಕಲಾಗಿದೆ. ಜ್ವರ, ಡೆಂಗ್ಯೂ, ಚಿಕೂನ್‌ ಗುನ್ಯಾ, ಮಲೇರಿಯಾ ಇನ್ನಿತರ ರೋಗಗಳು ಬಂದಾಗ ಗ್ರಾಮದ ಜನರ ಸ್ವಾಸ್ಥÂ ಕಾಪಾಡಬೇಕಾದ ಆರೋಗ್ಯ ಉಪ ಕೇಂದ್ರ ಬೀಗ ಹಾಕಿರುವುದು ದುರಂತ! 

Advertisement

ಚಿಕಿತ್ಸೆಗೆ ಸಿದ್ದಾಪುರಕ್ಕೆ ಹೋಗಬೇಕು
ಆಜ್ರಿಹರ ಗ್ರಾಮಸ್ಥರು ಏನಾದರೂ ಖಾಯಿಲೆ ಬಂದರೆ ಚಿಕಿತ್ಸೆಗೆ ಸುಮಾರು 7 ಕಿ.ಮೀ. ದೂರದ ಸಿದ್ದಾಪುರಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಅದರ ಬದಲಿಗೆ ಚಿಕಿತ್ಸೆಗೆ ಇಲ್ಲಿಯೇ ಯಾರಾದರೂ ಒಬ್ಬ ಸಿಬಂದಿಯನ್ನಾದರೂ ನೇಮಿಸಿ, ಕನಿಷ್ಠ ಪಕ್ಷ ಸಾಮಾನ್ಯ ಖಾಯಿಲೆಗಳಿಗೆ ಔಷಧಿ ನೀಡುವಂತಾದರೆ ಅದೇ ದೊಡ್ಡ ಉಪಕಾರವಾಗಬಹುದು ಎನ್ನುವುದು ಸ್ಥಳೀಯರೊಬ್ಬರ ಅಭಿಪ್ರಾಯ.  

ನಿಯಮ ಏನು ಹೇಳುತ್ತೆ?
25 ಸಾವಿರ ಜನಕ್ಕೆ 12 ಬೆಡ್‌ಗಳಿರುವ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬೇಕು. ಆದರೆ ಕುಂದಾಪುರ ತಾಲೂಕಿನಲ್ಲಿ 1970-80 ರಲ್ಲಿ ನಡೆದ ಜನಗಣತಿಯ ಅಂಕಿ-ಅಂಶಗಳ ಅನ್ವಯ ಈ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆರೋಗ್ಯ ಉಪ ಕೇಂದ್ರದಲ್ಲಿ ಸಹಾಯಕ ನರ್ಸ್‌, ಸಿಬಂದಿ ಬೆಳಗ್ಗೆ ಫೀಲ್ಡ್‌ ಕೆಲಸವಿದ್ದರೆ, ಕನಿಷ್ಠ ಮಧ್ಯಾಹ್ನದ ನಂತರವಾದರೂ ತೆರೆದಿರಬೇಕು. ಅದಲ್ಲದೆ ವಾರಕ್ಕೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇಲ್ಲಿಗೆ ಬಂದು ತಪಾಸಣೆ ನಡೆಸಬೇಕು. ಆದರೆ ಆಜ್ರಿಯ ಕೇಂದ್ರಕ್ಕೆ ವೈದ್ಯರ ದರ್ಶನವೇ ಈವರೆಗೆ ಆಗಿಲ್ಲ.

ಕೂಡಲೇ ಪರಿಶೀಲಿಸುತ್ತೇನೆ
ಹುದ್ದೆ ಖಾಲಿಯಿದ್ದು, ಭರ್ತಿಗೆ ಈಗಾಗಲೇ ಸಿದ್ದಾಪುರ ವೈದ್ಯಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. ಅಲ್ಲಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡುವಂತೆಯೂ ತಿಳಿಸಿದ್ದೇನೆ. ಆದರೆ ಬೀಗ ಹಾಕಿರುವ ಬಗ್ಗೆ ಈಗ ನನ್ನ ಗಮಕ್ಕೆ ಬಂದಿದೆ. ಕೂಡಲೇ ಪರಿಶೀಲನೆ ನಡೆಸುತ್ತೇನೆ.
– ಡಾ| ನಾಗಭೂಷಣ ಉಡುಪ, ಕುಂದಾಪುರ ತಾಲೂಕು ವೈದ್ಯಾಧಿಕಾರಿ

– ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next