ಸಿದ್ದಾಪುರ: ಕೋವಿಡ್ 19 ವೈರಸ್ ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಕೇಂದ್ರ ಸರಕಾರ ದೇಶವ್ಯಾಪಿ ಲಾಕ್‌ಡೌನ್ ಕ್ರಮ ಜಾರಿಗೆ ತಂದಿದ್ದರು. ಆದರೆ ಸಿದ್ದಾಪುರ ಪರಿಸರದಲ್ಲಿ ಗುರುವಾರ ಬೆಳಗ್ಗೆ ವಸ್ತುಗಳ ಖರೀದಿಗಾಗಿ ಜನರು ಪೇಟೆಗೆ ಆಗಮಿಸಿದಾಗ “ಅನವಶ್ಯಕವಾಗಿ ಪೇಟೆಯಲ್ಲಿ ತಿರುಗಾಡಬೇಡಿ’ ಎಂದು ಪೊಲೀಸ್ ಮನವಿ ಮಾಡಿಕೊಂಡರೂ ಅದಕ್ಕೆ ಬಗ್ಗದಾಗ ಲಾಠಿ ಬೀಸಿ ಗುಂಪು ಚದುರಿಸತೊಡಗಿದರು.
ಅನಂತರ ಎಲ್ಲ ವಾಹನಗಳ ಸಂಚಾರ ನಿಲುಗಡೆಗೊಂಡಿತು. ಅಂಗಡಿ ಮುಂಗಟ್ಟು , ಹೊಟೇಲ್‌ಗಳು ಬಾಗಿಲು ಮುಚ್ಚಿದವು. ಮೆಡಿಕಲ್, ಪೆಟ್ರೋಲ್ ಪಂಪ್‌ಗ್ಳು ಎಂದಿನಂತೆ ಬಾಗಿಲು ತೆರೆದಿದ್ದವು. ಬ್ಯಾಂಕ್, ಸಹಕಾರಿ ಸಂಸ್ಥೆಗಳು ಕೂಡ ಎಂದಿನಂತೆ ವ್ಯವಹಾರ ನಡೆಸಿದವು.
ಆದರೆ ಗ್ರಾಹಕರು ಇಲ್ಲದೆ ಖಾಲಿ ಖಾಲಿಯಾಗಿತ್ತು.ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಾದ ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಅಂಪಾರು, ಶಂಕರನಾರಾಯಣ, ಅಮಾಸೆಬೈಲು, ಹಾಲಾಡಿ, ಗೋಳಿಯಂಗಡಿ, ಆವರ್ಸೆ, ವಂಡಾರು, ಹಿಲಿಯಾಣ, ಬೆಳ್ವೆ, ಅಲಾºಡಿ, ಆರ್ಡಿ, ಶೇಡಿಮನೆ, ಅರಸಮ್ಮಕಾನು, ಹೆಂಗವಳ್ಳಿ, ತೊಂಬತ್ತು, ಮಡಾಮಕ್ಕಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಅಂಗಡಿ ಮುಗ್ಗಟ್ಟು, ಹೊಟೇಲ್‌ಗಳು ಮುಚ್ಚಿದ್ದವು.
ಇಸ್ಪೀಟ್ ಆಟಗಾರರ ವಿರುದ್ಧ ಕ್ರಮಕ್ಕಾಗಿ ಆಗ್ರಹ
ಇಸ್ಪೀಟ್, ರಿಕ್ರಿಯೇಶನ್ ಕ್ಲಬ್‌ಗಳು ಬಂದ್ ಆದ ಹಿನ್ನಲೆಯಲ್ಲಿ ಇಸ್ಪೀಟ್ ಆಟಗಾರರು ಗುಡ್ಡೆ, ಹಾಡಿ ಪ್ರದೇಶಗಳಲ್ಲಿ ತಂಡೋಪ ತಂಡವಾಗಿ ಸೇರಿಕೊಂಡು ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ಕೋವಿಡ್ 19 ಭೀತಿಯಿಂದ ಊರಿನ ಹೊರಗಿರುವವರು ಹೆಚ್ಚಾಗಿ ಬಂದಿದ್ದು ಅವರಲ್ಲಿ ಸೋಂಕು ಪೀಡಿತರು ಇದ್ದರೆ, ಅದು ಹರಡುವ ಸಾಧ್ಯತೆ ಇರುದರಿಂದ ಇಸ್ಪೀಟ್ ಆಡಿಸುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.