Advertisement

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

03:37 PM Sep 24, 2024 | Team Udayavani |

ಸಿದ್ದಾಪುರ: ಸಿದ್ದಾಪುರ ಪೇಟೆಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರ ಜೀವಕ್ಕೆ ಆಪತ್ತು ತಂದಿದೆ. ದ್ವಿಚಕ್ರ ವಾಹನ ಸವಾರರು, ಬೀಡಾಡಿ ಹಸುಗಳಿಗೆ ಢಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿದೆ. ಬೀಡಾಡಿ ಹಸುಗಳ ಹಾವಳಿ ನಿಯಂತ್ರಿಸಬೇಕಾದವರು, ತಮ್ಮೇಗೂ ಸಂಬಂಧ ಇಲ್ಲವೆಂಬಂತೆ ನಿರ್ಲಿಪ್ತತೆಯಿಂದ ವರ್ತಿಸುತ್ತಿದ್ದಾರೆ.
ರಾತ್ರಿಯ ವೇಳೆಯಲ್ಲಿ ರಸ್ತೆಯ ಮಧ್ಯೆ ಹಾಗೂ ಬದಿಗಳಲ್ಲಿ ಬೀಡಾಡಿ ದನಗಳು ಮಲಗಿರುತ್ತವೆ. ವಾಹನ ಸವಾರರಿಗೆ ಅವುಗಳು ಕಾಣಿಸದೇ ಬಂದು ಡಿಕ್ಕಿ ಹೊಡೆಯುತ್ತಾರೆ. ಕೆಲವೊಂದು ಸಲ ಬೀಡಾಡಿ ದನಗಳ ಕಾಲುಗಳು ಮುರಿದು, ರಸ್ತೆಯ ಬದಿಗಳಲ್ಲಿ ಒದ್ದಾಡುತ್ತಿರುತ್ತವೆ. ಇನ್ನೂ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಹಸುಗಳು ಢಿಕ್ಕಿ ಹೊಡೆದು, ಕೈ ಕಾಲುಗಳು ಮುರಿದುಕೊಂಡು ಆಸ್ಪತ್ರೆಗೆ ಸೇರುವುದು ಮಾಮೂಲಿಯಾಗಿದೆ. ಅವುಗಳ ನಿಯಂತ್ರಣ ಮಾಡಬೇಕಾದ ಗ್ರಾ.ಪಂ. ಮಾತ್ರ ತಮ್ಮಗೇನು ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ.

Advertisement

ಮೈಕ್‌ ಕಟ್ಟಿ ಕೂಗಿದ್ದೇ ಕೂಗಿದ್ದು…
ಗ್ರಾ.ಪಂ.ಗೆ ಬೀಡಾಡಿ ದನಗಳ ಹಾವಳಿ ಹೆಚ್ಚಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಾಕಿದ ದನಕರುಗಳನ್ನು ರಾತ್ರಿ ವೇಳೆಯಲ್ಲಿ ಪೇಟೆಯಲ್ಲೇ ಬಿಡುವುದು ಮತ್ತು ವಾಹನ ಸವಾರರಿಗೆ ತೊಂದರೆ ಉಂಟುಮಾಡುವ ದನಕರುಗಳ ಮಾಲಕರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪಂಚಾಯತ್‌ ವತಿಯಿಂದ ಆಟೋಗೊಂದು ಮೈಕ್‌ ಕಟ್ಟಿ ಸರ್ವ ವ್ಯಾಪ್ತಿಯಲ್ಲೂ ಕೂಗಿದ್ದೇ ಕೂಗಿದ್ದು. ಇದಾಗಿ ತಿಂಗಳು ಕಳೆದರೂ, ಇಂದಿಗೂ ಯಾವುದೇ ಕ್ರಮವಾಗಿಲ್ಲ.

ನಿಯಂತ್ರಿಸದಿದ್ದರೆ ಪ್ರತಿಭಟನೆ
ಹಗಲು ವೇಳೆಯಲ್ಲಿ ಪೇಟೆಯ ಹತ್ತಿರದ ಮನೆಯ ಹಿತ್ತಲುಗಳಿಗೆ ಹಸುಗಳು ದಾಳಿ ಮಾಡಿ, ಕೃಷಿ, ತರಕಾರಿ ಬೆಳೆಗಳನ್ನು ಮತ್ತು ಹೂ ಗಿಡಗಳನ್ನು ತಿಂದು ನಾಶ ಮಾಡುತ್ತಿವೆ. ಗ್ರಾ.ಪಂ. ಬೀಡಾಡಿ ಹಸುಗಳನ್ನು ಹಾವಳಿಯನ್ನು ನಿಯಂತ್ರಿಸದಿದ್ದರೆ, ಪಂಚಾಯತ್‌ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗ್ರಾ.ಪಂ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಚರ್ಚಿಸಿ ಕ್ರಮ
ಸಿದ್ದಾಪುರ ಪೇಟೆಯಲ್ಲಿ ಬೀಡಾಡಿ ದನಗಳ ಬಗ್ಗೆ ವಾಹನ ಸವಾರರಿಂದ ಮತ್ತು ಗ್ರಾಮಸ್ಥರಿಂದ ದೂರುಗಳು ಬಂದಿವೆ. ಪಂಚಾಯತ್‌ ವತಿಯಿಂದ ಆಟೋಗೊಂದು ಮೈಕ್‌ ಕಟ್ಟಿ ಪ್ರಚಾರ ಮಾಡಿದ್ದೇವೆ. ಇಲ್ಲಿಯ ತನಕ ಯಾರೂ ಕೂಡ ತಮ್ಮ ಹಸುಗಳನ್ನು ತೆಗೆದುಕೊಂಡು ಹೋಗಿಲ್ಲ. ಮುಂದೆ ಏನ್ನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುತ್ತೇವೆ.
-ಶ್ರೀಲತಾ ಶೆಟ್ಟಿ ಕಡ್ರಿ, ಅಧ್ಯಕ್ಷರು, ಗ್ರಾ.ಪಂ. ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next