Advertisement
ಈ ಅಭಿಪ್ರಾಯ ಮೂಡುವುದು ಸಿದ್ದಾಪುರ ಗ್ರಾಮವನ್ನು ಒಂದು ಸುತ್ತು ಹಾಕಿದಾಗ. ಸಿದ್ದಾಪುರವೇನೋ ಶರವೇಗದಲ್ಲಿ ಬೆಳೆಯುತ್ತಿದೆ. ಅಷ್ಟೇ ವೇಗದಲ್ಲಿ ಅಭಿವೃದ್ಧಿ ಕಾಮಗಾರಿಗಳೂ ಸಾಧ್ಯವಾದರೆ ಇಡೀ ಗ್ರಾಮಕ್ಕೇ ಹೊಸ ಕಳೆ ಬರಲಿದೆ. ಅದು ಸಾಧ್ಯವಾಗಬೇಕೆಂಬುದು ಜನರ ಆಗ್ರಹ. ಅದಕ್ಕೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.
Related Articles
Advertisement
ನೀರಿನ ಸಮಸ್ಯೆ: ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಗ್ರಾಮದ ಬುಡದಲ್ಲಿ ವಾರಾಹಿ ನದಿ ಹರಿಯುತ್ತಿದೆ. ವಾರಾಹಿ ಕಾಲುವೆ ಗ್ರಾಮದಲ್ಲಿ ಹಾದು ಹೋಗಿದೆ. ಮತ್ತೂಂದು ಭಾಗದಲ್ಲಿ ಕುಬ್ಜಾ ನದಿ ಹರಿಯುತ್ತಿದೆ. ಆದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದರೆ ಪರಿಹಾರವಾದೀತು.
ಸಿದ್ದಾಪುರಕ್ಕೆ ಸುತ್ತಮುತ್ತಲಿನ ಗ್ರಾಮಗಳ ಮತ್ತು ಘಟ್ಟದ ಮೇಲಿನ, ಕೆಳಗಿನ ಜನರು ಬರುವುದರಿಂದ ಜನ ದಟ್ಟಣೆ ಹೆಚ್ಚಿ ಸ್ವಚ್ಛತೆಯೂ ಸವಾಲಾಗಿ ಪರಿಣಮಿಸಿದೆ. ಇದರತ್ತ ಸ್ಥಳೀಯಾಡಳಿತ ಗಮನಹರಿಸಬೇಕಿದೆ. ಪೇಟೆಯ ಒಳಚರಂಡಿಗಳು ಅವ್ಯವಸ್ಥೆಯಿಂದ ಕೂಡಿದೆ. ಇದನ್ನೂ ಸರಿಪಡಿಸಬೇಕಿದೆ. ಸಿದ್ದಾಪುರ ಪೇಟೆಗೆ ಬಹು ಮುಖ್ಯವಾಗಿ ಸುಸಜ್ಜಿತವಾದ ಸರ್ಕಲ್ ಹಾಗೂ ಬಸ್ ನಿಲ್ದಾಣ ನಿರ್ಮಾಣವಾಗಬೇಕಿದೆ. ಸಂತೆ ಮಾರುಕಟ್ಟೆ ವ್ಯವಸ್ಥೆಯೂ ಆಗಬೇಕಿದೆ.
ಸಿದ್ದಾಪುರ ಪೇಟೆಗೆ ಒಂದೆಡೆಯಿಂದ ಕುಂದಾಪುರ, ಶಿವಮೊಗ್ಗ ರಾಜ್ಯ ಹೆದ್ದಾರಿ ಬಂದು ಸೇರಿದರೆ, ಇನ್ನೊಂದೆಡೆಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಯನ್ನು ಶಿವಮೊಗ್ಗ ಜಿಲ್ಲೆಗೆ ಬೆಸೆಯುವ ಪ್ರಮುಖ ಹೆದ್ದಾರಿ ಬಂದು ಸೇರುತ್ತದೆ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳಿಗೆ ಮಹತ್ವದ ಪ್ರದೇಶವಾಗಿರುವ ಸಿದ್ದಾಪುರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ.
ಪಿಯು ಕಾಲೇಜು ಬೇಕು ಸಿದ್ದಾಪುರ ಸರಕಾರಿ ಪ್ರೌಢಶಾಲೆಯು ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್, ದ್ವಿತೀಯ ಮತ್ತು 5ನೇ ಸ್ಥಾನ ತಂದು ಕೊಟ್ಟು ಜನಪ್ರಿಯವಾಯಿತು. ಐವತ್ತೆಂಟು ವರ್ಷಗಳ ಈ ಪ್ರೌಢಶಾಲೆಗೆ ಸಾಕಷ್ಟು ಜಾಗವಿದ್ದು, ಇಲ್ಲಿ ಕಲಿತವರೆಲ್ಲ ಕಾಲೇಜಿಗೆ ದೂರದ ಊರುಗಳಿಗೆ ಹೋಗಬೇಕಿದೆ. ಅದರ ಬದಲಾಗಿ ಇಲ್ಲೊಂದು ಸರಕಾರಿ ಪಿಯು ಕಾಲೇಜು ಒದಗಿಸಿಕೊಟ್ಟರೆ ಅನುಕೂಲವಾದೀತು. ದೂರದ ಕಾಲೇಜುಗಳಿಗೆ ತೆರಳಲು ಸಾಧ್ಯವಾಗದೇ ಅರ್ಧಕ್ಕೇ ವಿದ್ಯಾಭ್ಯಾಸ ನಿಲ್ಲಿಸುವ ವಿದ್ಯಾರ್ಥಿಗಳಿಗೂ ಓದಲು ಅವಕಾಶ ಕಲ್ಪಿಸಿದಂತಾಗಲಿದೆ. ಇದರೊಂದಿಗೆ ಸರಕಾರಿ ಐಟಿಐ ಕಾಲೇಜು ಪ್ರಾರಂಭಗೊಂಡರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಹಳ್ಳಿಹೊಳೆ, ಯಡಮೊಗೆ, ಕಮಲಶಿಲೆ, ಆಜ್ರಿ, ಕೊಡ್ಲಾಡಿ, ಅಂಪಾರು, ಅಮಾಸೆಬೈಲು ಹಾಗೂ ಉಳ್ಳೂರು-74 ಗ್ರಾಮಗಳ ವಿದ್ಯಾರ್ಥಿಗಳೂ ಫಲಾನುಭವಿಗಳಾಗುತ್ತಾರೆ. ಇದರೊಂದಿಗೆ ಸರಕಾರಿ ಬಸ್ ಸೌಕರ್ಯವೂ ಸಿಗಬೇಕಿದೆ.
ಬೇಡಿಕೆಗಳು
*ಸಿದ್ದಾಪುರಕ್ಕೆ ಸುಸಜ್ಜಿತವಾದ 24×7 ಸರಕಾರಿ ಆಸ್ಪತ್ರೆ
*ಸರಕಾರಿ ಪಿಯು ಕಾಲೇಜು
*ಸರಕಾರಿ ಐಟಿಐ ಕಾಲೇಜುಗಳು
*ವಾಹನ ಪಾರ್ಕಿಂಗ್ ವ್ಯವಸ್ಥೆ
*ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
*ನದಿಗಳಿಗೆ ವೆಂಟೆಂಡ್ ಡ್ಯಾಂ
*ವಾರಾಹಿ ನದಿಯ ನೀರು ಸಮರ್ಪಕ ಬಳಕೆಗೆ ಒತ್ತು
ನೀರು ಹರಿಸುವ ಕಾರ್ಯವಾಗಲಿ: ವಾರಾಹಿ ಕಾಲುವೆಯ ನೀರು ಏತ ನೀರಾವರಿಯ ಮೂಲಕ ಸಿದ್ದಾಪುರ ಕೆಳಪೇಟೆಯ ಕಾಸಿಕೆರೆಗೆ ಹಾಯಿಸಿ, ಅಲ್ಲಿನಿಂದ ನೈಸರ್ಗಿಕ ತೋಡುಗಳ ಮೂಲಕ ನೀರು ಹರಿಸಿದಲ್ಲಿ ಕುಡಿಯುವ ನೀರು ಸೇರಿದಂತೆ, ನೂರಾರು ಎಕರೆ ಕೃಷಿ ಭೂಮಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಅಂತರ್ಜಲವು ವೃದ್ಧಿಸುತ್ತದೆ. ಈ ಒಂದು ಯೋಜನೆಯಿಂದ ಸಿದ್ದಾಪುರ ಗ್ರಾಮದ ಜತೆಯಲ್ಲಿ ಪಕ್ಕದ ಅಂಪಾರು, ಆಜ್ರಿ ಗ್ರಾಮಗಳಿಗೂ ಉಪಯೋಗವಾಗಲಿದೆ. ಈ ಯೋಜನೆ ಕೂಡಲೇ ಕಾರ್ಯರೂಪಕ್ಕೆ ಬರಬೇಕಾಗಿದೆ. –ಶಿವರಾಮ ಶೆಟ್ಟಿ ಜನ್ಸಾಲೆ ಅಧ್ಯಕ್ಷರು, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ
ಶಾಸಕರಲ್ಲಿ ಮನವಿ: ಸಿದ್ದಾಪುರ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿಗಳು ಕಾಮಗಾರಿಗಳು ನಡೆದಿವೆ. ಇನ್ನೂ ಹಲವು ಸೌಕರ್ಯಗಳಿಗೆ ಶಾಸಕರಲ್ಲಿ ಮನವಿ ಮಾಡಲಾಗಿದೆ. ಅನುದಾನ ಸಿಗುವ ಭರವಸೆ ಸಿಕ್ಕಿದ್ದು, ಗ್ರಾಮದಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ. –ಶೇಖರ ಕುಲಾಲ, ಅಧ್ಯಕ್ಷರು, ಗ್ರಾ.ಪಂ., ಸಿದ್ದಾಪುರ
– ಸತೀಶ್ ಆಚಾರ್ ಉಳ್ಳೂರು