Advertisement

ಸಿದ್ದಾಪುರ: ರಾಜ್ಯ ಹೆದ್ದಾರಿ ಬದಿಯಲ್ಲೇ ಕಸದ ಕಾಶಿ

12:15 AM Jun 08, 2019 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಸಿದ್ದಾಪುರಕ್ಕೆ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೆದ್ದಾರಿಯ ಬದಿಯಲ್ಲಿಯೇ ತ್ಯಾಜ್ಯ ರಾಶಿ ಬಿದ್ದಿದ್ದು, ಜನರನ್ನು ರೋಗದ ಭೀತಿ ಆವರಿಸಿದೆ.

Advertisement

ಪೇಟೆಯಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡಲು ಗ್ರಾ. ಪಂ.ಗೆ ಸೂಕ್ತ ಜಾಗದ ಕೊರತೆ ಇಲ್ಲದಿದ್ದರೂ, ವ್ಯವಸ್ಥೆ ಮಾಡುವಲ್ಲಿ ಎಡವುತ್ತಿದೆ. ಸಂಗ್ರಹವಾಗುವ ಕಸ ಘನ ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಆಗುತ್ತಿದ್ದರೂ, ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಅಪಾದನೆಯೂ ಇದೆ.

ಪೇಟೆಯ ಅನತಿ ದೂರದಲ್ಲಿರುವ ಸಣ್ಣಹೊಳೆಯ ಹತ್ತಿರ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ಪೇಟೆಯವರು ಮತ್ತು ಗ್ರಾಮದ ಹೊರಗಿನವರು ಕಸವನ್ನು ಎಸೆಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಸ್ಥಳೀಯಾಡಳಿತ ಮಾತ್ರ ಕೈಕಟ್ಟಿ ಕುಳಿತಿದೆ.

ಇದರ ಪರಿಣಾಮ ಮಳೆಗಾಲದಲ್ಲಿ ಕಸ ಹಾಗೂ ಇತರ ತ್ಯಾಜ್ಯಗಳ ನೀರು ನೇರವಾಗಿ ನದಿಗೆ ಸೇರುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಮನೆ ಮಾಡಿದೆ. ದುರ್ನಾತ‌ ಬಿರುತ್ತಿದ್ದು, ವಾಹನ ಸವಾರರು ಹಾಗೂ ದಾರಿ ಹೋಕರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದೆ. ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಬರಲಾರದೆ, ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಕೊಂಡೆ ಜೀವನ ಸಾಗಿಸುತ್ತಿದ್ದಾರೆ.

ನಾಯಿಗಳ ಹಾವಳಿ
ಕಸ ಕಡ್ಡಿಗಳಲ್ಲದೆ, ಕೋಳಿ ಸೇರಿದಂತೆ ಇತರ ತ್ಯಾಜ್ಯಗಳನ್ನು ಹೆದ್ದಾರಿ ಬದಿಯಲ್ಲಿ ಎಸೆಯುವುದರಿಂದ ಇದನ್ನು ತಿನ್ನಲು ಬರುವ ನಾಯಿಗಳ ಹಾವಳಿ ಹೆಚ್ಚಾಗಿದೆ.

Advertisement

ಕೆಲವು ಬಾರಿ ತ್ಯಾಜ್ಯಗಳು ತಿನ್ನಲು ಸಿಗದಿದ್ದಾಗ ನಾಯಿಗಳು ಶಾಲಾ ಮಕ್ಕಳು ಸೇರಿದಂತೆ ದಾರಿಹೋಕರಿಗೆ ತೊಂದರೆ ನೀಡುತ್ತವೆ. ಬೈಕಿನಲ್ಲಿ ಹೋಗುವರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇದರಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬುದು ಸಾರ್ವಜನಿಕರ ಅಳಲು.

ಈ ಬಗ್ಗೆ ಸ್ಥಳೀಯಾಡಳಿತ, ಪರಿಸರ ಇಲಾಖೆ, ರಾಜ್ಯ ಹೆದ್ದಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಗಮನ ಹರಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಕ್ರಮ ಕೈಗೊಳ್ಳಲಾಗುವುದು
ಹೊರಗಿನ ಜನರಿಂದ ಇಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಸತೀಶ್‌ ನಾಯಕ್‌,
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ.

Advertisement

Udayavani is now on Telegram. Click here to join our channel and stay updated with the latest news.

Next