Advertisement
ಅತ್ಯುತ್ತಮ ಪುಸ್ತಕಗಳಿದ್ದರೂ, ಹೆಚ್ಚಿನ ಸಂಖ್ಯೆಯ ಓದುಗರಿದ್ದರೂ ಸಮರ್ಪಕ ಕಟ್ಟಡದ ಕೊರತೆ ಪಟ್ಟಣದ ಗ್ರಂಥಾಲಯದ ಶಾಖೆ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. 1980ರಲ್ಲಿ ಪಪಂನ ಒಂದು ಕೋಣೆಯಲ್ಲಿ ಶಾಖಾ ಗ್ರಂಥಾಲಯ ಆರಂಭಗೊಂಡಿತು. ಅಂದು ಸಾಮಾಜಿಕ ಧುರೀಣರಾಗಿದ್ದೂ ಸಾಹಿತ್ಯ, ಕಲೆ ಮುಂತಾದವುಗಳಲ್ಲಿ ಅಭಿಮಾನ ಇಟ್ಟುಕೊಂಡಿದ್ದ ಕೆಲವು ಹಿರಿಯರ ಆಸಕ್ತಿ, ಮುತುವರ್ಜಿ ಫಲವಾಗಿ ಗ್ರಂಥಾಲಯ ಆರಂಭಗೊಂಡು ಉತ್ತಮವಾಗಿಯೂ ನಡೆಯುತ್ತಿದ್ದುದನ್ನು, ವೇರ್ಣೆಕರ್ ಎನ್ನುವವರು ಈ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದ ಬಗ್ಗೆ ಹಿರಿಯ ಓದುಗರು ಈಗಲೂ ನೆನಪಿಸಿಕೊಳ್ಳುತ್ತಾರೆ.
Related Articles
Advertisement
ಆದರೂ ಹಳೆಯ ಬಾಗಿಲು, ಒದ್ದೆಯಾಗುವ ಗೋಡೆ ಆತಂಕ ತರುತ್ತಿವೆ. ಈ ಹಿಂದೆ ಕಾರ್ಯ ನಿರ್ವಹಿಸಿದ ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಒದಗಿಸಲು ಸಾಕಷ್ಟು ಶ್ರಮಿಸಿದ್ದರೂ ಸೂಕ್ತ ಸ್ಥಳ ದೊರಕದ ಕಾರಣ ಪ್ರಯತ್ನ ಫಲ ನೀಡಿಲ್ಲ. ಈ ಬಗ್ಗೆ ಇಲ್ಲಿನ ಓದುಗರು, ಕೆಲವು ಸಾಹಿತ್ಯಾಸಕ್ತ ಅಧಿಕಾರಿಗಳು ಪ್ರಯತ್ನಪಟ್ಟಿದ್ದರೂ ಜನಪ್ರತಿನಿಧಿಗಳ ಅಸಡ್ಡೆಯಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ. ವೇದಿಕೆಯ ಮೇಲೆ ಗ್ರಂಥಾಲಯವೇ ದೇವಾಲಯ, ಊರಿಗೊಂದು ಗ್ರಂಥಾಲಯ ಬೇಕು ಎಂದೆಲ್ಲ ಭಾಷಣ ಬಿಗಿಯುವ ಜನಪ್ರತಿನಿಧಿಗಳ ಬಳಿ ಗ್ರಂಥಾಲಯ ಕಟ್ಟಡಕ್ಕೆ ನಿವೇಶನ ಒದಗಿಸುವ ಬೇಡಿಕೆ ಇಟ್ಟಿದ್ದರೂ ಅವರಿಂದ ಕವಡೆ ಕಿಮ್ಮತ್ತಿನ ಪ್ರಯೋಜನವಾಗಿಲ್ಲದಿರುವುದು ಓದುಗರ ದುರಂತ.ಈಗಿರುವ ಚಿಕ್ಕದಾದ 4 ಚಿಕ್ಕ ಕೋಣೆಗಳಲ್ಲೇ ಪುಸ್ತಕ ಸಂಗ್ರಹ, ಓದುಗರ ಚಾವಡಿ, ಸಿಬ್ಬಂದಿ ಕಚೇರಿ ಕಾರ್ಯ ನಿರ್ವಹಿಸಬೇಕಿದೆ. ಇಂಥ ಹಲವು ಕೊರತೆ, ಸಮಸ್ಯೆಗಳ ನಡುವೆಯೂ ಇಲ್ಲಿನ ಸಿಬ್ಬಂದಿ ಗ್ರಂಥಾಲಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಪುಸ್ತಕ, ನಿಯತಕಾಲಿಕಗಳನ್ನು ಸಮರ್ಪಕವಾಗಿ ಇಟ್ಟುಕೊಂಡಿದ್ದರ ಜೊತೆಗೆ ಓದುಗರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಒಂದು ಮಾದರಿ ಗ್ರಂಥಾಲಯವಾಗಿರುವ ಇಲ್ಲಿನ ಗ್ರಂಥಾಲಯಕ್ಕೆ ಸಮರ್ಪಕ ಕಟ್ಟಡದ್ದೇ ಕೊರತೆ.
ಇಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಓದುಗರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಅಲ್ಲದೇ ಈಗಾಗಲೇ 16 ಸಾವಿರದ ಹತ್ತಿರ ಪುಸ್ತಕಗಳಿದ್ದು, ಈಗ ಮತ್ತೆ 3 ಸಾವಿರ ಪುಸ್ತಕ ಬಂದಿದೆ. ಅವನ್ನು ಇರಿಸಿಕೊಳ್ಳುವುದು ಕಷ್ಟವಾಗಿದೆ. ಮಹಿಳೆ ಮತ್ತು ಮಕ್ಕಳಿಗೆ ಪ್ರತ್ಯೇಕ ಓದುವ ಸ್ಥಳ ಒದಗಿಸಬೇಕೆಂದು ಯೋಚನೆ ಇದ್ದರೂ ಸಾಧ್ಯವಾಗುತ್ತಿಲ್ಲ. ಶಿಥಿಲವಾದ ಕಟ್ಟಡ, ಹಳೆಯ ಬಾಗಿಲುಗಳು ರಕ್ಷಣೆಯ ಕಾರಣಕ್ಕೆ ಆತಂಕ ಹುಟ್ಟಿಸಿದೆ. ಇಲ್ಲಿನ ಓದುಗರ ಸ್ಪಂದನೆ ಉತ್ತಮವಾಗಿದೆ. ಮೇಲಾಧಿಕಾರಿಗಳ ಸಹಕಾರವೂ ಕಾಲಕಾಲಕ್ಕೆ ದೊರಕುತ್ತಿದೆ. –ಶೋಭಾ ಜಿ., ಶಾಖಾ ಗ್ರಂಥಾಲಯ ಸಹಾಯಕಿ
-ಗಂಗಾಧರ ಕೊಳಗಿ