Advertisement

ಸಿಕ್ಕೇದುಂಗುರ ನಾಟಕದಸಿದ್ದಲಿಂಗ ದೇಸಾಯಿ ಇನ್ನಿಲ್ಲ

12:12 PM Jan 02, 2017 | |

ಧಾರವಾಡ: ಕವಿ, ನಾಟಕಕಾರ ಸಿದ್ದಲಿಂಗ ದೇಸಾಯಿ (75)ಅನಾರೋಗ್ಯದಿಂದ ರವಿವಾರ ಬೆಳಿಗ್ಗೆ ನಿಧನರಾದರು. ಮೃತರು ಇಬ್ಬರು ಪತ್ನಿಯರು, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ 1950ರಲ್ಲಿ ಜನಿಸಿದ್ದ ದೇಸಾಯಿ, ಅಪ್ಪಟ ಗ್ರಾಮೀಣ ಭಾಷಿಕರಿಗೆ ಗುಂಗು ಹಿಡಿಸುವಂತಹ ಹಾಡು ಬರೆದು ಹೆಸರು ಮಾಡಿದ್ದರು. 

Advertisement

ಉಂಡ ನೀರ ಉಗುಳುದರಾಗ…ಬಂದ ನಿಂತಿ ಬಾಗಲದಾಗ…ಎನ್ನುವ ಹಾಡು 80ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲೆಲ್ಲ ಜನಪ್ರಿಯವಾಗಿ ಅವರಿಗೆ ಹೆಸರು ತಂದು ಕೊಟ್ಟಿತ್ತು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ (ಇಂಗ್ಲಿಷ್‌) ಪದವೀಧರರಾಗಿದ್ದ ಅವರು ಕೆಲವು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿ ಭಾಷಾಂತರ ಸಹಾಯಕ ಎಂದು ಸೇವೆ ಸಲ್ಲಿಸಿದ್ದರು. 

ಚಿಗಳಿ, ಕ್ಯಾದಗೀ ಜವುಳು, ಕವಿ ಸಂಹಾರ ಸೇರಿದಂತೆ ಮೂರು ಕವನ ಸಂಕಲನ ರಚಿಸಿದ್ದ ದೇಸಾಯಿ, ಆಲಮೇಲದ ಶ್ರೀ ಶಿವಲಿಂಗರಾವ್‌ ದೇಶಮುಖರು ಎಂಬ ಆತ್ಮಕಥೆಯನ್ನು ಭಾಷಾಂತರಿಸಿದ್ದಾರೆ. ಅವರ ಜನಪ್ರಿಯ ಸಿಕ್ಕೇದುಂಗುರ ರೇಡಿಯೋ ನಾಟಕ 1987ರಲ್ಲಿ ಅಖೀಲ ಭಾರತ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಹಲವಾರು ರಂಗ ಪ್ರದರ್ಶನ ಕಂಡಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲೂ 1998ರಲ್ಲಿ ಈ ನಾಟಕ ಪ್ರಥಮ ಸ್ಥಾನ ಪಡೆದಿತ್ತು. ಟಿ.ಎಸ್‌.ನಾಗಾಭರಣ ಅವರು ಇದನ್ನು ಚಲನಚಿತ್ರ ಮಾಡುವುದಕ್ಕೆ ದೇಸಾಯಿ ಅವರೊಂದಿಗೆ ಹಲವು ಬಾರಿ ಮಾತುಕತೆ ಕೂಡ ನಡೆಸಿದ್ದರು. ಚಿಮಣಾ ಎಂಬ ಇನ್ನೊಂದು ನಾಟಕ ಉತ್ತಮ ಬಾನುಲಿ ನಾಟಕ ಪ್ರಶಸ್ತಿ ಪಡೆದು ರಾಷ್ಟ್ರೀಯ ನಾಟಕವಾಗಿ ಪ್ರಸಾರವಾಗಿದೆ.

ಪ್ರಜಾರಾಜ್ಯೋತ್ಸವ ನಿಮಿತ್ತ ದೆಹಲಿಯಲ್ಲಿ ನಡೆದ ಅಖೀಲ ಭಾರತ ಆಕಾಶವಾಣಿ ರಾಷ್ಟ್ರೀಯ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಸಿದ್ದಲಿಂಗ ದೇಸಾಯಿ ಅವರು ಕನ್ನಡ ಮತ್ತು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ 12ರ ಸಂಪಾದನೆ, ಪ್ರೊ| ಎಂ.ಆರ್‌. ಸಾಖರೆ ಅವರ ಹಿಸ್ಟರಿ ಆಂಡ್‌ ಫಿಲಾಸಫಿ ಆಫ್‌ ಲಿಂಗಾಯತ ರಿಲಿಜನ್‌ ಎಂಬ ಆಂಗ್ಲ ಗ್ರಂಥದ ಅನುವಾದವನ್ನು “ಲಿಂಗಾಯತ ಧರ್ಮ: ಇತಿಹಾಸ ಮತ್ತು ದರ್ಶನ’ ಎಂಬ ಕನ್ನಡ ಪುಸ್ತಕ, ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನಮಠದಿಂದ ಪ್ರಕಟವಾಗಿದೆ.

Advertisement

ಜಾನಪದ ಜಂಗಮ ಹುಕ್ಕೇರಿ ಬಾಳಪ್ಪ ಕುರಿತು ವ್ಯಕ್ತಿಚಿತ್ರ ಕವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಕನ್ನಡ ಪಠ್ಯವಾಗಿತ್ತು. ಒಂದು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದ ದೇಸಾಯಿ, ಕರ್ನಾಟಕ ಸರಕಾರ ನೀಡುವ ಕರ್ನಾಟಕ ಏಕೀಕರಣ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ-ಮಹಾರಾಷ್ಟ್ರ ಗಡಿ ಚಳವಳಿಯಿಂದ ಜೇಪಿಯವರ ನವನಿರ್ಮಾಣ ಕ್ರಾಂತಿ, ಗೋಕಾಕ ಕನ್ನಡ ಚಳವಳಿ ಹೀಗೆ ಅನೇಕ ಸಾಮಾಜಿಕ, ಕನ್ನಡಪರ ಹೋರಾಟಗಳಲ್ಲಿ ದೇಸಾಯಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಸಂತಾಪ: ದೇಸಾಯಿ ಅವರ ನಿಧನಕ್ಕೆ ಕವಿಸಂನ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹಾಗೂ ಪದಾಧಿಕಾರಿಗಳಾದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಗೌರವ ಉಪಾಧ್ಯಕ್ಷ ರಾಚಪ್ಪ ಹಡಪದ, ಕಾರ್ಯಾಧ್ಯಕ್ಷ ಡಿ.ಎಂ.ಹಿರೇಮಠ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ|ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಮೋಹನ ನಾಗಮ್ಮನವರ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಪ್ರಕಾಶ.ಎಸ್‌. ಉಡಿಕೇರಿ, ಗುರು ತಿಗಡಿ, ಸತೀಶ ತುರಮರಿ, ಮನೋಜ ಪಾಟೀಲ ಹಾಗೂ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಬಳಗ ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next