Advertisement
ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠಾಧೀಶರಾಗಿದ್ದ ಶ್ರೀಬಾಲಗಂಗಾಧರ ನಾಥ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಇಬ್ಬರು ಮೇರು ಪುರುಷರನ್ನು ಜಿಲ್ಲೆ ಕೊಡುಗೆ ನೀಡಿದ್ದು, ವಿಶ್ವ ಇಬ್ಬರನ್ನು ಸ್ಮರಿಸುತ್ತಿದೆ.
Related Articles
Advertisement
ದೇಗುಲ ಮಠದೊಂದಿಗೆ ಬಾಂಧವ್ಯ: ಜಿಲ್ಲೆಯ ಕನಕಪುರ ತಾಲೂಕಿನ ಶ್ರೀದೇಗುಲ ಮಠದೊಂದಿಗೆ ಅವರ ಒಡನಾಟ ಹೆಚ್ಚಾಗಿತ್ತು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗುರುಗಳಾಗಿದ್ದ ಶ್ರೀಉದ್ದಾನ ಶಿವಯೋಗಿಗಳ ಶಿಷ್ಯರಾಗಿದ್ದ ಶ್ರೀನಿರ್ವಾಣ ಮಾಹ ಸ್ವಾಮೀಜಿ ಅವರು 1974ರಲ್ಲಿ ದೇಗುಲ ಮಠದ ಉಸ್ತುವಾರಿವಹಿಸಿಕೊಂಡರು. ತದನಂತರ ಶ್ರೀ ಇಮ್ಮಡಿ ಮಹಾಲಿಂಗೇಶ್ವರ ಸ್ವಾಮೀಜಿ ಅವರು ದೇಗುಲ ಮಠದ ಉಸ್ತುವಾರಿವಹಿಸಿಕೊಂಡರು.
ಸಿದ್ಧಗಂಗಾ ಶ್ರೀಗಳಿಗೆ ಇವರೊಂದಿಗೆ ಆತ್ಮೀಯತೆಯಿತ್ತು. ಇಬ್ಬರು ಸಮಕಾಲೀನರು. ಒಂದೇ ಗುರುಗಳ ಶಿಷ್ಯರು. ಹೀಗಾಗಿ ದೇಗುಲ ಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಿದ್ಧಗಂಗಾಶ್ರೀಗಳ ಹಾಜರಾಗುತ್ತಿದ್ದರು ಎಂದು ಶ್ರೀಮಠದ ಭಕ್ತರಲ್ಲೊಬ್ಬರಾದ ನಿವೃತ್ತ ಸಂಸ್ಕೃತ ಶಿಕ್ಷಕ ಸಿ.ಎಂ. ಕೆಂಪಯ್ಯ ಸ್ಮರಿಸುತ್ತಾರೆ.
ಬೆಟ್ಟಳ್ಳಿ, ಅಂಕನಹಳ್ಳಿ ಮತ್ತು ಬಂಡೇ ಮಠದ ಸ್ವಾಮೀಜಿಗಳು, ದೇಗುಲ ಮಠದ ಹಾಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀಇಮ್ಮಡಿ ನಿರ್ಮಾಣ ಸ್ವಾಮೀಜಿ ಮತ್ತು ಶ್ರೀಬಸಲವಲಿಂಗ ಸ್ವಾಮೀಜಿಗಳು ಸಹ ಶ್ರೀ ಶಿವಕುಮಾರ ಸ್ವಾಮೀಜಿ ಅರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ.
ವೀರಾಪುರ ಮಾದರಿ ಗ್ರಾಮವಾಗಲಿಲ್ಲ: ಆದಿಚುಂಚನಗಿರಿ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು 13 ಜನವರಿ 2013ರಲ್ಲಿ ನಿಧನರಾದಾಗ ಸರ್ಕಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ರಾಮನಗರ ತಾಲೂಕು ಬಿಡದಿ ಹೋಬಳಿ ಬಾನಂದೂರು ಮತ್ತು ಶ್ರೀಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು
ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರ ಗ್ರಾಮಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿ ಅನುದಾನ ಘೋಷಿಸಿತ್ತು. ಆದರೆ, ವರ್ಷಗಳು ಉರುಳಿದರು ಸರ್ಕಾರ ಮಾತ್ರ ತಾನು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಜಿಲ್ಲೆಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಲಾದರೂ ಎರಡೂ ಗ್ರಾಮಗಳನ್ನು ಮಾದರಿಯಾಗಿ ಪರಿವರ್ತಿಸಿ ಇಬ್ಬರೂ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ದೊಡ್ಡಗಂಗವಾಡಿಯಲ್ಲಿ ಶ್ರೀಗಳು ಸ್ಥಾಪಿಸಿದ ಪ್ರೌಢಶಾಲೆ: ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರು ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸಲು ಶ್ರಮಿಸಿದ್ದರು. ಶ್ರೀಗಳು ಇಲ್ಲಿ ಪ್ರೌಢಶಾಲೆ ಸ್ಥಾಪಿಸುವ ಉದ್ದೇಶವನ್ನು ಪ್ರಕಟಿಸುತ್ತಿದ್ದಂತೆ ಗ್ರಾಮದ ನಿವಾಸಿ ಗಂಗಾಧರಯ್ಯ ಎಂಬುವರು ತಮಗೆ ಸೇರಿದ 2 ಎಕರೆ ಭೂಮಿಯನ್ನು ಶಾಲೆ ನಿರ್ಮಾಣಕ್ಕಾಗಿ ನೀಡಿದರು.
ದಾನಿಗಳು ಮತ್ತು ಸಂಸದ ರಾಜಶೇಖರ ಮೂರ್ತಿ ಅವರ ಅನುದಾನದಲ್ಲಿ ಸ್ವಾಮೀಜಿ ಶಾಲೆಯ ಕಟ್ಟಡವನ್ನು ನಿರ್ಮಿಸಿ, ಪ್ರೌಢಶಾಲೆಯನ್ನು 1990ರಲ್ಲಿ ಸ್ಥಾಪಿಸಿದರು. ಪ್ರಸ್ತುತ ಶಾಲೆಯನ್ನು ತುಮಕೂರು ಜಿಲ್ಲೆ ಕ್ಯಾತಸಂದ್ರದ ಶ್ರೀಸಿದ್ಧಗಂಗಾ ಎಜುಕೇಷನಲ್ ಟ್ರಸ್ಟ್ ನಿರ್ವಹಿಸುತ್ತಿದೆ. ಶಾಲೆಯಲ್ಲಿ 91 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶಾಲೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ರಾಮನಗರ ಜಿಲ್ಲೆಯೊಂದಿಗೆ ಒಳ್ಳೆಯ ಒಡನಾಟ ಇದ್ದ ಸಿದ್ಧಗಂಗಾಶ್ರೀಗಳು ಹಲವು ಬಾರಿ ಭೇಟಿ ನೀಡಿದ್ದರು. ಬಸವ ಜಯಂತಿ ವೇಳೆ ಬಸವೇಶ್ವರರ ಕುರಿತು ನಾಟಕ ಪ್ರದರ್ಶನಗಳು ನಡೆಯುತ್ತಿತ್ತು. ಬಸವ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಶ್ರೀಗಳು ನಾಟಕ ಮುಗಿಯುವವರಿಗೂ ಜನರೊಂದಿಗೆ ಇರುತ್ತಿದ್ದರು. -ಚಂದ್ರಶೇಖರಯ್ಯ, ಪ್ರಾಂಶುಪಾಲರು, ಪಿರಂಗಿ ಸ್ವಾಮಿ ಸಂಸ್ಕೃತ ಶಾಲೆ, ಮೈಸೂರು ಶ್ರೀಶಿವಕುಮಾರ ಸ್ವಾಮೀಜಿ ಅವರ ಸಾಮಾಜಿಕ ಕೈಂಕರ್ಯಗಳನ್ನು ಮನುಕುಲ ಸದಾ ಸ್ಮರಿಸುತ್ತದೆ. ರಾಮನಗರ ಜಿಲ್ಲೆಗೆ ಹಲವು ಶೈಕ್ಷಣಿಕ ಸಂಸ್ಥೆಗಳ ಕೊಡುಗೆ ನೀಡಿದ್ದಾರೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಿರೂಪಿಸಿದ್ದಾರೆ.
-ರಾಜಶೇಖರ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ * ಬಿ.ವಿ.ಸೂರ್ಯ ಪ್ರಕಾಶ್