ತುಮಕೂರು: ಸೋಮವಾರ ಲಿಂಗೈಕ್ಯರಾದ ಡಾ| ಶಿವಕುಮಾರ ಸ್ವಾಮೀಜಿಗಳ ಸಮಾಧಿ ಐಕ್ಯ ವಿಧಿವಿಧಾನ ಮಂಗಳವಾರ ಲಕ್ಷಾಂತರ ಭಕ್ತ ಸಾಗರ , ನೂರಾರು ಮಠಾಧಿಪತಿಗಳು ಮತ್ತು ಗಣ್ಯಾತಿ ಗಣ್ಯರ ಸಮಕ್ಷಮದಲ್ಲಿ ಮಂಗಳವಾರ ಸಿದ್ಧಗಂಗಾ ಮಠದಲ್ಲಿ ನೆರವೇರಿತು.
ಗೋವಿನ ಸಗಣಿಯಿಂದ ತಯಾರಿಸಲಾದ 10 ಸಾವಿರ ಗಟ್ಟಿ ವಿಭೂತಿಯಿಂದ ಸಮಾಧಿ ಕ್ರಿಯೆ ಮಾಡಲಾಗಿದೆ.900 ಕೆಜಿ ಉಪ್ಪು ,ಮೆಣಸು ಮತ್ತು ಮರಳನ್ನು ಬಳಸಿಕೊಳ್ಳಲಾಗಿದೆ.
ಪುಣ್ಯ ನದಿಗಳ ನೀರಿನಿಂದ ಸ್ನಾನ ಮಾಡಿಸಲಾಗಿದೆ. ಕಾಷಾಯ ವಸ್ತ್ರಗಳ ಧಾರಣೆ ಮಾಡಲಾಯಿತು.
ಸಮಾಧಿಯೊಳಗೆ ಪದ್ಮಾಸನದಲ್ಲಿ ಕೂರಿಸಿ,ಬಾಯಿಯಲ್ಲಿ ಶ್ರೀಗಳು ಹಲವು ವರ್ಷಗಳಿಂದ ಪೂಜಿಸುತ್ತಿದ್ದ ಇಷ್ಟ ಲಿಂಗವನ್ನು ಇರಿಸಲಾಗಿದೆ.
ಹಳೆ ಮಠಕ್ಕೆ ತಾಗಿಕೊಂಡಿರುವಂತೆಯೇ ಉದ್ಧಾನ ಶಿವಯೋಗಿಗಳ ಸಮಾಧಿಯ ಪಕ್ಕದಲ್ಲೇ ಡಾ.ಶಿವಕುಮಾರ ಸ್ವಾಮೀಜಿಯವರ ಸಮಾಧಿ ನಿರ್ಮಾಣ ಮಾಡಲಾಗಿದೆ.
ಅಮೃತ ಶಿಲೆಯಿಂದ ನಿರ್ಮಾಣಮಾಡಲಾದ ಭವ್ಯ ಸಮಾಧಿಯೊಳಗೆ ನಡೆದಾಡುವ ದೇವರು ಐಕ್ಯರಾಗಿದ್ದಾರೆ.
ಶ್ರೀಗಳ ಲಿಂಗ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಕೈಗಿತ್ತರು ಈ ವೇಳೆ ಸಿದ್ಧಲಿಂಗ ಸ್ವಾಮೀಜಿ ಅವರು ಭಾವುಕರಾಗಿ ಕಣ್ಣೀರಿಟ್ಟರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ನೂರಾರು ಮಂದಿ ಪೀಠಾಧಿಪತಿಗಳು ಅಂತಿಮ ಕ್ರಿಯಾ ವಿಧಾನಗಳು ನಡೆಯುವ ವೇಳೆ ಉಪಸ್ಥಿತರಿದ್ದು ನಮಸ್ಕರಿದರು.