Advertisement

ಗಂಗೆಯಂತೆ ಹರಿದುಬಂದ ಭಕ್ತ ಸಾಗರ

12:35 AM Jan 23, 2019 | |

ಬೆಂಗಳೂರು: ಮನೆ-ಮನದೊಳಗೆ ಜ್ಞಾನ, ದಾಸೋಹ ಹಾಗೂ ಅರಿವಿನ ದೀಪ ಹಚ್ಚಿರುವ ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಸಿದ್ಧಗಂಗಾ ಮಠಕ್ಕೆ ಜನ ಸಾಗರ ಗಂಗೆಯಂತೆ ಹರಿದು ಬಂದಿತ್ತು.

Advertisement

ಶಿಕ್ಷಣ, ವಸತಿ ಹಾಗೂ ದಾಸೋಹದ ಮೂಲಕ ಲಕ್ಷಾಂತರ ಕುಟುಂಬಕ್ಕೆ ಸಾಕ್ಷಾತ್‌ ದೇವರಾಗಿದ್ದ ಡಾ.ಶಿವ ಕುಮಾರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದಿದ್ದ ಪ್ರತಿಯೊಬ್ಬರಲ್ಲೂ ನಮ್ಮೊಂದಿಗೆ ಇದ್ದ ದೇವರನ್ನು ಕಳೆದು ಕೊಂಡಿದ್ದೇವೆಂಬ ಆತಂಕ, ನಿರಾಸೆ ಮನೆ ಮಾಡಿತ್ತು.

ಲಿಂಗೈಕ್ಯರಾದ ದೇವರ ಅಂತಿಮ ದರ್ಶನ ಪಡೆಯಲೇ ಬೇಕು ಎಂಬುದು ಸೇರಿದ್ದ ಎಲ್ಲ ಭಕ್ತರ ಏಕಮೇವ ಗುರಿಯಾಗಿತ್ತು. ಏನೇ ಆಗಲಿ ಶ್ರೀಗಳ ಲಿಂಗಕಾಯ ದರ್ಶನ ಮಾಡಲೇ ಬೇಕೆಂದು ಭಕ್ತರು ಬಿಸಿಲು, ಆಯಾಸ ಲೆಕ್ಕಿಸದೆ ಸರತಿ ಸಾಲಿನಲ್ಲಿ ಮುನ್ನುಗ್ಗುತ್ತಿದ್ದರು. ಗೋಸಾಲ ಸಿದ್ದೇಶ್ವರ ವೇದಿಕೆ ಸಮೀಪಿಸುತ್ತಿದ್ದಂತೆ ಡಾ.ಶಿವಕುಮಾರ ಸ್ವಾಮೀಜಿಗೆ ಜೈ, ಸಿದ್ಧಗಂಗಾ ಮಠಾಧೀಶರಿಗೆ ಜೈ, ತ್ರಿವಿಧ ದಾಸೋಹಿಗೆ ನಮನ ಎನ್ನವ ಘೋಷಣೆ ಮುಗಿಲು ಮುಟ್ಟಿತ್ತು.

12 ಲಕ್ಷ ಭಕ್ತರಿಂದ ದರ್ಶನ: ರಾಜ್ಯದ ವಿವಿಧ ಭಾಗದ ಹನ್ನೆರಡು ಲಕ್ಷಕ್ಕೂ ಅಧಿಕ ಭಕ್ತರು ಸೋಮವಾರ ಮತ್ತು ಮಂಗಳವಾರ ಸಿದ್ಧಗಂಗಾ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಸ್‌, ರೈಲು ಹಾಗೂ ಸ್ವಂತ ವಾಹನಗಳಲ್ಲಿ ಭಕ್ತರು ಸಿದ್ಧಗಂಗಾ ಕ್ಷೇತ್ರಕ್ಕೆ ಬಂದಿದ್ದರು. ಸೋಮವಾರ ಮಧ್ಯಾಹ್ನದಿಂದ ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿದ್ದ ಭಕ್ತರ ದಂಡು ಮಂಗಳವಾರ ಸಂಜೆಯ ವರೆಗೂ ನಿರಂತರವಾಗಿ ಸಾಗಿ ಬಂದಿತ್ತು. ದೂರದ ಊರುಗಳಿಂದ ತುಮಕೂರು ನಗರಕ್ಕೆ ಬಂದಿಳಿದ ಭಕ್ತರನ್ನು ಶ್ರೀಮಠಕ್ಕೆ ಕರೆದುಕೊಂಡು ಹೋಗಲು ಶೆಟಲ್‌ ಸರ್ವಿಸ್‌ ವ್ಯವಸೆœಯನ್ನು ಜಿಲ್ಲಾಡಳಿತ ಮಾಡಲಾಗಿತ್ತು. ಲಿಂಗಕಾಯದ ಅಂತಿಮ ದರ್ಶನಕ್ಕೆ ರಾಜ್ಯದ ವಿವಿಧ ಭಾಗದಿಂದ ಬಂದಿರುವ ಭಕ್ತರು ಶ್ರೀಗಳ ನಗು ಮುಖದ ಫೋಟೋಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕೋರಿ, ಅದನ್ನು ಸರತಿ ಸಾಲಿನಲ್ಲಿ ತಮ್ಮ ತಲೆ ಮೇಲೆ ಇಟ್ಟುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಯುವ ಭಕ್ತರು ಶ್ರೀಗಳ ನಗುಮುಖದ ಬೃಹದಾಕಾರದ ಕೇಸರಿ ಧ್ವಜ ಹಿಡಿದುಕೊಂಡು ಬಂದು ಅಂತಿಮ ದರ್ಶನ ಪಡೆದರು.

ಶ್ರೀಗಳ ಹುಟ್ಟೂರಾದ ಮಾಗಡಿ ತಾಲೂಕಿನ ವೀರಾಪುರದಿಂದ ಸಿದ್ಧಗಂಗಾ ತಪ್ಪಲಿನ ಕ್ಯಾತಸಂದ್ರದ ಪ್ರತಿ ಮನೆಯ ಭಕ್ತರು, ಗಡಿನಾಡು ಕೋಲಾರದ ಆದಿಯಾಗಿ ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹೀಗೆ ಇಡೀ ರಾಜ್ಯದ ಭಕ್ತರ ದಂಡೆ ಶ್ರೀಗಳ ಲಿಂಗಕಾಯದ ಅಂತಿಮ ದರ್ಶನಕ್ಕೆ ಸೇರಿದ್ದರು.

Advertisement

ಸೋಮವಾರ ಸಂಜೆ 4 ಗಂಟೆಗೆ ಆರಂಭವಾದ ಲಿಂಗಕಾಯದ ಅಂತಿಮ ದರ್ಶನ ಮಂಗಳವಾರ ಸಂಜೆಯವರೆಗೂ ನಿರಂತರವಾಗಿ ನಡೆಯಿತು. ಕ್ಯಾತಸಂದ್ರ ರೈಲು ನಿಲ್ದಾಣದ ಸಮೀಪದ ಮುಖ್ಯದ್ವಾರ ಹಾಗೂ ರಾಗಿಹೊಲ ಸಮೀಪದಿಂದ ಹಳೇ ಮಠದ ಬೀದಿಯ ಮುಖೇನ ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಶ್ರಮ ಪಡಬೇಕಾಯಿತು.

ರುದ್ರಾಕ್ಷಿ ರಥದಲ್ಲಿ ಮೆರವಣಿಗೆ: ಶ್ರೀಗಳ ಲಿಂಗಕಾಯದ ಅಂತಿಮ ಶರೀರದ ನಂತರ ಗೋಸಲಾ ಸಿದ್ದೇಶ್ವರ ವೇದಿಕೆಯಿಂದ ಹಳೇ ಮಠದ ಮುಖ್ಯದ್ವಾರದವರೆಗೂ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕರೆತರಲಾಯಿತು. ಹಳೇ ಮಠದ ಪ್ರಸಾದ ಮಂದಿರದ ಎದುರು ಭಾಗದಿಂದ ರುದ್ರಾಕ್ಷಿ ಮಾಲೆಗಳನ್ನು ಸುತ್ತಿರುವ ರಥದಲ್ಲಿ ಉದ್ದಾನ ಶಿವಯೋಗಿ ಮಂದಿರದ ವರೆಗೂ ಭಾವಪೂರ್ಣ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆ ದೃಶ್ಯವನ್ನು ನೋಡಲು ಭಕ್ತ ಸಮೂಹ ಶ್ರೀಮಠದ ಬೀದಿ ಮಾತ್ರವಲ್ಲದೇ ಕಟ್ಟಡದ ಇಕ್ಕೆಲಗಳಲ್ಲೂ ಸೇರಿದ್ದರು.

ಭಾರತರತ್ನಕ್ಕೆ ಭಕ್ತರ ಆಗ್ರಹ

ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಕೇಂದ್ರ ಸರ್ಕಾರ ಭಾರತರತ್ನ ಘೋಷಣೆ ಮಾಡಬೇಕು ಎಂಬ ಕೂಗು ಶ್ರೀಗಳ ಅಂತಿಮ ದರ್ಶನದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತ ಸಾಗರದಿಂದ ಒಕ್ಕೊರಲಿನಿಂದ ಕೇಳಿಸುತ್ತಿತ್ತು. ಭಾರತ ರತ್ನಕ್ಕೆ ಆಗ್ರಹಿಸಿ ಬರೆದಿರುವ ಫ್ಲೆಕ್ಸ್‌ಗಳನ್ನು ಹಿಡಿದೇ ಬಹುತೇಕ ಭಕ್ತರು ಅಂತಿಮ ದರ್ಶನ ಪಡೆದರು.

ಸಮವಸ್ತ್ರ ಬಿಟ್ಟು ಪಂಚೆ,ಶಲ್ಯ ಧರಿಸಿದ ಪೊಲೀಸರು

ಶಿವಕುಮಾರ ಶ್ರೀಗಳ ಕ್ರಿಯಾ ವಿಧಿ ವಿಧಾನ ನಡೆಯಲಿರುವ ಸಮಾಧಿಯ ಬಳಿ ಭದ್ರತೆ ನೀಡುವುದಕ್ಕಾಗಿ ನಿಯೋಜನೆಗೊಂಡಿದ್ದ 8 ಪೊಲೀಸರು ಸಮವಸ್ತ್ರ ತೆಗೆದು, ಪಂಚೆ ಹಾಗೂ ಶಲ್ಯ ಧರಿಸಿದ್ದರು. ಭದ್ರತೆ ಹಾಗೂ ಮಠದ ಶಿಷ್ಟಾಚಾರದಂತೆ ಪೊಲೀಸರು ಶಲ್ಯ ಹಾಗೂ ಪಂಚೆ ಧರಿಸಿ ಗದ್ದುಗೆ ಪ್ರವೇಶಿಸಿದ್ದರು. ಸಮಾಧಿ ಸ್ಥಳಕ್ಕೆ ಮುಖ್ಯಮಂತ್ರಿ ಸೇರಿ ಹಲವು ರಾಜಕಾರಣಿಗಳು, ಗಣ್ಯರು, ಮಠಾಧಿಪತಿಗಳು ಬಂದಿದ್ದರಿಂದ ಅವರಿಗೆ ಭದ್ರತೆ ನೀಡುವ ಉದ್ದೇಶದಿಂದ 8 ಪೊಲೀಸರನ್ನು ನಿಯೋಜಿಸಲಾಗಿತ್ತು.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next