ತುಮಕೂರು : ದಿಢೀರ್ ಅನಾರೋಗ್ಯ ಕಾಣಿಸಿದ ಹಿನ್ನೆಲೆಯಲ್ಲಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಸಣ್ಣ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶತಾಯುಷಿ, ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿಕೊಂಡ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಚೇತರಿಸಿಕೊಂಡು ಶನಿವಾರ ಮಠಕ್ಕೆ ಮರಳಿದ್ದಾರೆ.
ಶುಕ್ರವಾರ ಬೆಳಗ್ಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜೆ ಮುಗಿಸಿದ ನಂತರ ಶ್ರೀಗಳಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರಲಾಗಿತ್ತು.
ಶ್ರೀಗಳ ದೇಹದಲ್ಲಿ ಎಂಟು ಸ್ಟೆಂಟ್‌ಗಳಿದ್ದು, ನಿನ್ನೆ ಮತ್ತೆ ಮೂರು ಸ್ಟೆಂಟ್ ಅಳವಡಿಸಲಾಗಿದೆ. ಪಿತ್ತನಾಳದಲ್ಲಿ ಬ್ಲಾಕೇಜ್ ತೆರವುಗೊಳಿಸಲಾಗಿದೆ. ಪಿತ್ತನಾಳ ಬ್ಲಾಕ್ ಆಗಿದ್ದರಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು. ನ್ಯೂಮೋನಿಯಾದಿಂದ ಶ್ರೀಗಳು ಬಳಲುತ್ತಿದ್ದರು.
ಶ್ರೀಗಳಿಗೆ 10 ದಿನಗಳ ಸಂಪೂರ್ಣ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದು ಉಳಿದ ಚಿಕಿತ್ಸೆಗಳನ್ನು ಮಟದಲ್ಲೇ ಮುಂದುವರಿಸಲಾಗುತ್ತಿದೆ.
ಶ್ರೀಗಳೂ ನಾನು ಇಲ್ಲಿರುವುದಿಲ್ಲ ಮಠಕ್ಕೆ ವಾಪಾಸಾಗುತ್ತೇನೆ ಎಂದು ಪಟ್ಟು ಹಿಡಿದಿದ್ದರು.
ಶ್ರೀಗಳು ಮಠದ ಬಳಿ ಕಾರಿನಿಂದ ಇಳಿದ ಬಳಿಕ ನಡೆದುಕೊಂಡೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮಠದಲ್ಲಿ ಶ್ರೀಗಳನ್ನು ಕಂಡು ನೆರೆದಿದ್ದ ನೂರಾರು ಭಕ್ತರು ಪುನೀತರಾದರು.