Advertisement

ಸತ್ಯದ ಹಾದಿಗೆ ಸಿದ್ಧರಾಮೇಶ್ವರ ವಚನ ಪ್ರೇರಣೆ

10:08 AM Jan 29, 2019 | Team Udayavani |

ರಾಯಚೂರು: ಸಮಾಜದಲ್ಲಿನ ಅಸಮಾನತೆ ಖಂಡಿಸಿ ಸತ್ಯದ ಹಾದಿಯಲ್ಲಿ ನಡೆಯಲು ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ವಚನಗಳು ಪ್ರೇರಣೆಯಾಗಿದ್ದವು. ಇಂದಿಗೂ ಅವರ ವಚನಗಳು ಪ್ರಸ್ತುತತೆ ಕಾಯ್ದುಕೊಂಡಿವೆ ಎಂದು ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರರ 847ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾವು ನಿರ್ವಹಿಸಿದ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಆದರ್ಶ ಜೀವನ ನಡೆಸಲು ಸಾಧ್ಯ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ವಚನಗಳನ್ನು ಬರೆಯುವ ಮೂಲಕ ವಚನ ಸಾಹಿತ್ಯ ಚಳವಳಿಯಲ್ಲಿ ಎಲ್ಲರ ಗಮನ ಸಳೆದಿದ್ದರು ಎಂದರು.

ಬಸವಾದಿ ಶರಣರ ಪರಂಪರೆಯಲ್ಲಿ ಬೆಳೆದು ವಚನ ಸಾಹಿತ್ಯದ ಮೂಲಕ ಈ ನಾಡಿಗೆ ಹೊಸ ವಿಚಾರಗಳನ್ನು ನೀಡಿ ಸಮಾಜ ಸುಧಾರಣೆಗೆ ಮುಂದಾದರು. ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನ ಬರೆದಿದ್ದು, 1,672 ವಚನಗಳು ಮಾತ್ರ ಪ್ರಸ್ತುತ ಲಭ್ಯ ಇವೆ ಎಂದರು.

ಜಯಂತಿಗಳು ಒಂದು ಜಾತಿಗೆ ಸಿಮೀತಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶರಣರು ಇಡೀ ಸಮಾಜಕ್ಕಾಗಿ ದುಡಿದರು. ಅವರನ್ನು ಎಲ್ಲರೂ ಸ್ಮರಿಸುವ ಕೆಲಸವಾಗಬೇಕು ಎಂದರು.

Advertisement

ಚಿತ್ರದುರ್ಗ ಮತ್ತು ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಜಗದ್ಗುರು ಶ್ರೀಮದ್‌ ನಿರಂಜನ ಸ್ವಾಮೀಜಿ ಮಾತನಾಡಿ, ಜಯಂತಿಗಳು ಆಚರಣೆಗೆ ಸಿಮೀತವಾಗದೇ ಅವರ ವೈಚಾರಿಕತೆ ಅನುಸರಿಸುವಂತಾಗಬೇಕು. ಭೋವಿ ಸಮಾಜ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲ ರಂಗದಲ್ಲೂ ಸಾಧನೆ ಮಾಡಬೇಕು ಎಂದರು.

ಶಾಸಕ ಡಾ| ಶಿವರಾಜ ಪಾಟೀಲ, ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಬಿ.ನೀಲಮ್ಮ, ಭೋವಿ ಸಮಾಜ ರಾಷ್ಟ್ರೀಯ ಅಧ್ಯಕ್ಷ ಡಾ| ರವಿ, ಸಿಪಿಐ ಹನುಮಂತರೆಡ್ಡಿ, ರಾಜ್ಯಾಧ್ಯಕ್ಷ ಯಲ್ಲಪ್ಪ, ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ಆಂಜನೇಯ ಗಾಣದಾಳ, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಸೇರಿ ಸಮಾಜದ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next