ಸೈದಾಪುರ: ಬೇಸಿಗೆ ಬಿಸಿಲ ಝಳದಿಂದ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಸಾರ್ವ ಜನಿಕರ ನೆತ್ತಿ ಸುಡುತ್ತಿದೆ. ಈ ವಾರ ದಲ್ಲಿ ಗರಿಷ್ಠ 42 ಹಾಗೂ ಕನಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾರ್ವಜನಿಕರ ನಿದ್ದೆಗಡಿಸಿದೆ. ಇದರಿಂದ ಜನ ತಂಪು ಪಾನೀಯ, ಹಣ್ಣು-ಹಂಪಲುಗಳತ್ತ ವಾಲುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಬಹುತೇಕ ಕಡೆ ಕಲ್ಲಂಗಡಿ ಹಣ್ಣುಗಳ ಬಳಕೆಯೇ ಹೆಚ್ಚು.
ಯಾದಗಿರಿ ಮಾರ್ಗದಿಂದ ಸೈದಾ ಪುರ, ರಾಯಚೂರ, ಗುರಮಠಕಲ್, ನಾರಾಯಣಪೇಟ ಸೇರಿದಂತೆ ಹೈದಾರಬಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಾಮ ಸಮುದ್ರ ಗ್ರಾಮದಲ್ಲಿನ ಕಲ್ಲಂಗಡಿ ಮಳಿಗೆಗಳು ಬಿಸಿಲ ಬೇಗೆಗೆ ತತ್ತರಿಸಿದ ಪ್ರಯಾಣಿಕರ ದಣಿವು ತೀರಿಸುತ್ತಿವೆ.
ಉತ್ತಮ ವ್ಯಾಪಾರ: ಬಿರು ಬಿಸಿನಲ್ಲಿ ಪ್ರಯಾಣ ಮಾಡಿ ಆಯಾಸ ಹೊಂದಿದ ಜನತೆ ತಂಪು ಪಾನೀಯಗಳಿಗೆ ಮೊರೆ ಹೋದರೆ, ಇನ್ನೂ ಕೆಲವರು ಕಲ್ಲಂಗಡಿ ಹಣ್ಣು ಸೇವಿಸಿ ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಹಣ್ಣಿನ ವ್ಯಾಪಾರ ತುಸು ಜೋರಾಗಿಯೇ ನಡೆದಿದ್ದು, ಗ್ರಾಮಸ್ಥರು ಕೂಡ ಉತ್ತಮ ಆದಾಯದ ಮಾರ್ಗ ಕಂಡುಕೊಂಡು ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ.
ಪ್ರಯಾಣಿಕರಿಗೆ ಅನುಕೂಲ: ಕಲ್ಲಂಗಡಿಯಲ್ಲಿ ವಿವಿಧ ನಮೂನೆ ಹಣ್ಣುಗಳಿದ್ದು, 30, 40, 50 ರೂ.ಗೆ ಒಂದರಂತೆ ಮಾರಾಟ ಮಾಡುತ್ತಾರೆ. ಕುಟುಂಬ ಸಮೇತ ಬಂದವರು, ಸ್ನೇಹಿತರು ವಾಹನಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಹಣ್ಣುಗಳನ್ನು ಸವಿಯುವುದು ಕಂಡು ಬರುತ್ತಿದೆ. ಸ್ಥಳೀಯರಿಗಿಂತ ಈ ಮಾರ್ಗದ ಮೂಲಕ ನಿತ್ಯ ಪ್ರಯಾಣ ಮಾಡುವವರು ಕಾಯಂ ಗ್ರಾಹಕರಾಗಿದ್ದಾರೆ. ಬೇಸಿಗೆ ನಾಲ್ಕು ತಿಂಗಳಲ್ಲಿ ಯಾವುದೇ ಸಂದರ್ಭದಲ್ಲಿ ಇಲ್ಲಿ ಕಲ್ಲಂಗಡಿ ಹಣ್ಣುಗಳು ದೊರೆಯುತ್ತವೆ.
ಒಟ್ಟಿನಲ್ಲಿ ಬಿಸಿಲು ನಾಡಿನಲ್ಲಿ ತಂಪು ಪಾನೀಯಗಳ ಬೇಡಿಕೆ ಹೆಚ್ಚಾಗುತ್ತಿದ್ದು ವ್ಯಾಪಾರ ಕೂಡ ತುರುಸಾಗಿಯೇ ನಡೆದಿದೆ.