Advertisement

38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಮೂಳೆ! ಅಂತಿಮ ನಮನಕ್ಕಾಗಿ ಕಾಯುತ್ತಿದೆ ಕುಟುಂಬ

07:03 PM Aug 14, 2022 | Team Udayavani |

ಶ್ರೀನಗರ: ಇಡೀ ದೇಶವೇ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿದೆ. ಆದರೆ ಆ ಒಂದು ಕುಟುಂಬ ಮಾತ್ರ ಎಂದೋ ಹುತಾತ್ಮನಾದ ತಮ್ಮ ಮನೆ ಮಗನ ದೇಹದ ಪಳೆಯುಳಿಕೆಯ ಬರುವಿಕೆಗೆ ಕಾಯುತ್ತಾ ಕುಳಿತಿದೆ.

Advertisement

ಹೌದು! 1984ರ ಮೇ 29ರಂದು ಸಿಯಾಚಿನ್‌ ಗಡಿಯಲ್ಲಿ ಹಿಮಪಾತದಿಂದ ಸಾವನ್ನಪ್ಪಿದ್ದ ಯೋಧ ಲ್ಯಾನ್ಸ್‌ ನಾಯಕ್‌ ಚಂದ್ರಶೇಖರ್‌ ಅವರ ಮೃತ ದೇಹದ ಪಳೆಯುಳಿಕೆ ಆ.13ರಂದು ಪತ್ತೆಯಾಗಿದೆ. ಬಂಕರ್‌ ಒಳಗೆ ಕೆಲ ಮೂಳೆಗಳು ಪತ್ತೆಯಾಗಿದ್ದು ಅದರೊಟ್ಟಿಗೆ ಚಂದ್ರಶೇಖರ್‌ ಅವರ ಸೇನೆಯ ಸಂಖ್ಯೆಯಿರುವ ಡಿಸ್ಕ್ ಕೂಡ ಸಿಕ್ಕಿದೆ. ಹೀಗಾಗಿ ಅದು 38 ವರ್ಷಗಳ ಹಿಂದೆ ಹುತಾತ್ಮರಾದ ಚಂದ್ರಶೇಖರ್‌ ಅವರದ್ದೇ ಮೂಳೆಗಳು ಎನ್ನುವುದು ದೃಢಪಟ್ಟಿದೆ.

ಈಗ ಆ ಪಳೆಯುಳಿಕೆಯನ್ನು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಅವರ ಮನೆಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ.

ಚಂದ್ರಶೇಖರ್‌ ಅವರ 65 ವರ್ಷದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಪಳೆಯುಳಿಕೆಗಾಗಿ ಕಾಯಲಾರಂಭಿಸಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸುವುದಕ್ಕೂ ಸಿದ್ಧತೆಗಳು ನಡೆದಿವೆ. ಚಂದ್ರಶೇಖರ್‌ ಅವರು ಹುತಾತ್ಮರಾಗುವಾಗ ಹಿರಿಯ ಮಗಳು 9 ವರ್ಷದವಳಾಗಿದ್ದು, ಕಿರಿಯವಳು 4 ವರ್ಷದವಳಾಗಿದ್ದಳು ಎಂದು ತಿಳಿಸಲಾಗಿದೆ.

Advertisement

ಸಿಯಾಚಿನ್‌ಗೆ ಕಾವಲಾಗಿದ್ದ ಚಂದ್ರಶೇಖರ್‌:
ಪಾಕ್‌ ಪಡೆಯು ದೃಷ್ಟಿ ನೆಟ್ಟಿದ್ದ ಸಿಯಾಚಿನ್‌ ಅನ್ನು ಉಳಿಸಿಕೊಳ್ಳಲೆಂದು 1984ರಲ್ಲಿ ನಡೆದ ಆಪರೇಷನ್‌ ಮೇಘದೂತದ ಭಾಗವಾಗಿ ಸಿಯಾಚಿನ್‌ 5965 ಕೇಂದ್ರವನ್ನು ರಕ್ಷಿಸಲು ಯೋಧರು ತೆರಳಿದ್ದರು. ಅದರಲ್ಲಿ ಚಂದ್ರಶೇಖರ್‌ ಕೂಡ ಒಬ್ಬರು. ಯೋಧರು ರಾತ್ರಿ ಮಲಗಿದ್ದ ಸಮಯದಲ್ಲಿ ಭಾರೀ ಹಿಮಪಾತ ಉಂಟಾಗಿತ್ತು. ಶಿಬಿರದಲ್ಲಿದ್ದ 18 ಯೋಧರು ಹುತಾತ್ಮರಾಗಿ, ಆ ಪೈಕಿ 14 ಮಂದಿಯ ಮೃತದೇಹಗಳು ಮಾತ್ರ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next