ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ, 93 ವರ್ಷದ ಶಾಮನೂರು ಶಿವ ಶಂಕರಪ್ಪ 2008, 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
2023ರ ಚುನಾವಣೆಯಲ್ಲೂ ಸ್ಪರ್ಧಿಸಲು ಸಜ್ಜಾಗಿದ್ದಾರೆ. 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ನಂತರ ಅಸ್ತಿ¤ತ್ವಕ್ಕೆ ಬಂದಿರುವ ದಾವಣಗೆರೆ ದಕ್ಷಿಣ ಕ್ಷೇತ್ರ ಈವರೆಗೆ ಕಂಡಿರುವ ಮೂರು ಚುನಾವಣೆಯಲ್ಲೂ ಶಾಮನೂರು ಶಿವಶಂಕರಪ್ಪ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮತ್ತು ಜೆಡಿಎಸ್ ವಿಫಲವಾಗಿವೆ.
2008ಕ್ಕಿಂತ ಮುನ್ನವೂ ಶಾಮನೂರು ಶಿವಶಂಕರಪ್ಪ 1994 ಮತ್ತು 2004ರ ಚುನಾವಣೆಯಲ್ಲೂ ಜಯಭೇರಿ ಬಾರಿಸಿದ್ದರು. ಒಮ್ಮೆ ಲೋಕಸಭಾ ಚುನಾವಣೆಯಲ್ಲಿನ ಸೋಲು ಹೊರತುಪಡಿಸಿದರೆ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಅಜೇಯರಾಗಿದ್ದಾರೆ. 1994ರ ಚುನಾವಣೆಯಲ್ಲಿ ಮಾತ್ರ ಬಿಜೆಪಿಯ ಎಲ್.ಬಸವರಾಜ್ ತುರುಸಿನ ಪೈಪೋಟಿ ನೀಡಿದ್ದರು.
ಕೆಲವೇ ಮತಗಳಲ್ಲಿ ಶಾಮನೂರು ಜಯ ಸಾಧಿಸಿದ್ದರು. ನಂತರದ ಚುನಾವಣೆಗಳಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ಅಂತರ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಸಾಗುತ್ತಿದೆ. 2023ರ ಚುನಾವಣೆಯಲ್ಲೂ ಅವರಿಂದ ಕ್ಷೇತ್ರ ಕಸಿದುಕೊಳ್ಳುವುದು ಅಷ್ಟೊಂದು ಸುಲಭ ಅಲ್ಲ ಎನ್ನುವ ವಾತಾವರಣ ಇದೆ. 65 ಸಾವಿರಕ್ಕೂ ಅಧಿಕ ಮತದಾರರ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ ಅಭೇದ್ಯ ಕೋಟೆಯನ್ನು ಮಣಿಸುವುದು ಇತರರಿಗೆ ಕಷ್ಟ ಸಾಧ್ಯ. ಇದೇ ರೀತಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದರೆ ದಾಖಲೆ ನಿರ್ಮಾಣ ಮಾಡಬಹುದು. ಈವರೆಗೆ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ.