Advertisement

ಗದ್ದೆ ಕಣ್ಮರೆಯಾಗುತ್ತಿರುವಾಗ ಭತ್ತ ಬೆಳೆದು ಗೆದ್ದ ಎಕ್ಕಾರು ರೈತ

10:07 AM Dec 19, 2019 | mahesh |

ಹೆಸರು: ಶ್ಯಾಮ್‌ ಶೆಟ್ಟಿ
ಏನೇನು ಕೃಷಿ: ಭತ್ತ
ವರ್ಷ: 65
ಕೃಷಿ ಪ್ರದೇಶ: 6 ಎಕರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬಜಪೆ: ದ.ಕ. ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ರೈತರ ಪಾಲಿಗೆ ಮೂಲ ಕೃಷಿಯೇ ಭತ್ತ. ಆದರೆ ನಗರೀಕರಣ, ವಾಣಿಜ್ಯ ಬೆಳೆಗಳ ಭರಾಟೆಯಲ್ಲಿ ಭತ್ತ ಕೃಷಿಯೇ ಕಣ್ಮರೆಯಾಗುತ್ತಿದ್ದು, ಹೊಲ- ಗದ್ದೆ ಹೊಂದಿರುವ ರೈತರೇ ಅಪರೂಪವಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಎಕ್ಕಾರು ಗ್ರಾ.ಪಂ. ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ಮೇಲೆಕ್ಕಾರು ಹೊಸಮನೆಯ ರೈತರಾದ ಶ್ಯಾಮ್‌ ಶೆಟ್ಟಿ ಅವರಿಗೆ ಈಗಲೂ ಭತ್ತವೇ ಮೂಲ ಕೃಷಿ. 65 ವರ್ಷ ವಯಸ್ಸಿನ ಶ್ಯಾಮ್‌ ಶೆಟ್ಟಿ ಅವರದ್ದು ಅಪ್ಪಟ ಕೃಷಿಕ ಕುಟುಂಬ. ತಂದೆ ಜಾರಪ್ಪ ಶೆಟ್ಟಿ , ಸೀತಾ ಶೆಟ್ಟಿ ಅವರ ಐವರು ಮಕ್ಕಳಲ್ಲಿ ಇವರು ಓರ್ವರು. ತಮ್ಮ 20ನೇ ವಯಸ್ಸಿನಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡರು. ಭತ್ತ ಕೃಷಿಯಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ ಅಂದರೆ, ತೋಟಗಾರಿಕಾ ಬೆಳೆಗಳ ಭರಾಟೆಯಲ್ಲಿ ಭತ್ತದ ಕೃಷಿ ನಷ್ಟ ಎಂದು ಹೇಳುವವರಿಗೆ ಇವರು ದೊಡ್ಡ ಸ್ಫೂರ್ತಿಯಾಗಿದ್ದಾರೆ. ತೆಂಗು 100, ಕಂಗು 1,000, ಅದಕ್ಕೆ ಕರಿಮೆಣಸು ಬಳ್ಳಿ ಬಿಟ್ಟು ಕೃಷಿ ಮಾಡುತ್ತಿದ್ದಾರೆ. ಹೈನುಗಾರಿಕೆ, ಗೋಬ ರ್‌ ಗ್ಯಾಸ್‌, ಎರೆಹುಳು ಘಟಕ ಹೊಂದಿದ್ದಾರೆ. ದನಗಳಿಗೆ ಹಿಂಡಿ ಹೆಚ್ಚು ಹಾಕದೇ ಹಸುರು ಹುಲ್ಲು ಬೆಳೆಸುವ ಮೂಲಕ ಅದಕ್ಕೆ ಹೆಚ್ಚು ಪ್ರಾಶಸ್ಥ್ಯ ನೀಡುತ್ತಿದ್ದಾರೆ.

ಒಟ್ಟು 6 ಎಕರೆಯಲ್ಲಿ ಕೃಷಿ
ಶ್ಯಾಮ್‌ ಶೆಟ್ಟಿ ಅವರಿಗೆ ಒಟ್ಟು 6ಎಕರೆ ಜಾಗವಿದೆ. ಮುಂಗಾರು ಮಳೆ ಆಧರಿಸಿ ಒಟ್ಟು 6 ಎಕರೆ ಜಾಗದಲ್ಲಿ ಭತ್ತ ಕೃಷಿ ಮಾಡುತ್ತಿದ್ದಾರೆ. ಇದರಲ್ಲಿ 4 ಎಕರೆ ಗದ್ದೆಯನ್ನು ಗೇಣಿಗೆ ಪಡೆದು ಕೃಷಿ ಮಾಡುತ್ತಿರುವುದು ವಿಶೇಷ. ಸಮೀ ಪದ ಹಡೀಲು ಬಿದ್ದ ಗದ್ದೆಯನ್ನು ಗೇಣಿಗೆ ತೆಗೆದುಕೊಂಡು ಭತ್ತದ ಕೃಷಿ ಮಾಡುತ್ತಿರುವುದು ಅವರಿಗೆ ಅದರ ಬಗ್ಗೆ ಇರುವ ಆಸಕ್ತಿ, ಕಾಳಜಿಗೆ ನಿದರ್ಶನ. ಹಿಂಗಾರು ಬೆಳೆ ಯನ್ನು 2 ಎಕರೆಯಲ್ಲಿ ಮಾಡುತ್ತಿದ್ದಾರೆ. ನೀರು ಸಮಸ್ಯೆ, ಗದ್ದೆಯ ಮಧ್ಯದಲ್ಲಿ ತೋಡು ಇರುವ ಕಾರಣ ಗೇಣಿಗೆ ತೆಗೆದುಕೊಂಡು ಆ ನಾಲ್ಕು ಎಕರೆಯಲ್ಲಿ ಭತ್ತದ ಕೃಷಿ ಮಾಡಲು ಕಷ್ಟವಾಗಿದೆ ಎಂದಿದ್ದಾರೆ ಶ್ಯಾಮ್‌ ಶೆಟ್ಟಿ.ಟಿಲ್ಲರ್‌ ಬಳಕೆ; ಮಗಳ ಸಾಥ್‌

ಟಿಲ್ಲರ್‌ ಮೂಲಕ ಉಳುಮೆಯನ್ನು ಶ್ಯಾಮ್‌ ಶೆಟ್ಟಿ ಯವರು ಸ್ವತಃ ಮಾಡುತ್ತಿದ್ದಾರೆ. ಅವರಿಗೆ ಮಗಳು ಪ್ರತಿಭಾ ಶೆಟ್ಟಿ ಅವರು ಟಿಲ್ಲರ್‌ನಲ್ಲಿ ಉಳುಮೆ ಮಾಡುವ ಮೂಲಕ ಸಾಥ್‌ ನೀಡುತ್ತಿರುವುದು ಮತ್ತೂಂದು ವಿಶೇಷ. ಮಗಳು ಪ್ರತಿಭಾ ಶೆಟ್ಟಿ ತಾ.ಪಂ.ಸದಸ್ಯೆ ಕೂಡ ಆಗಿದ್ದು, ಗದ್ದೆಯಲ್ಲಿ ಹಾರೆ ಹಿಡಿದು ಮಣ್ಣು ತೆಗೆದು, ಗದ್ದೆಯ ಬದುವನ್ನು ಕಟ್ಟುವಲ್ಲಿ ಸಹಕಾರ ನೀಡುತ್ತಿದ್ದಾರೆ. ಶ್ಯಾಮ್‌ ಶೆಟ್ಟಿ ಅವರ ಮಗ ಪ್ರಿತೇಶ್‌ ಕೂಡ ಭತ್ತದ ಬೇಸಾಯದ ಕಾರ್ಯಕ್ಕೆ ಗದ್ದೆಗೆ ಇಳಿದು ಸಹಕಾರ ನೀಡುತ್ತಾರೆ.

Advertisement

ಬೆಳೆದ ಭತ್ತವನ್ನು ಮಿಲ್‌ಗೆ ನೀಡಿ ತಮಗೆ ಬೇಕಾದ ಅಕ್ಕಿಯನ್ನು ಪಡೆದುಕೊಂಡು, ಬಾಕಿ ಉಳಿದ ಅಕ್ಕಿಯನ್ನು ಮಾರಾಟ ಮಾಡುತ್ತಾರೆ. ಬಾಳೆ, ತೆಂಗು, ಅಡಿಕೆ, ಕರಿಮೆಣಸುಗಳನ್ನು ಮೂಡುಬಿದಿರೆ ಅಥವಾ ಬಜಪೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಹಲವು ಕೃಷಿ ಪ್ರಶಸ್ತಿ
ಭತ್ತದ ಕೃಷಿಯಲ್ಲಿ ಸಾಕಷ್ಟು ಅನುಭವ ಹೊಂದಿ ರುವ ಅವರಿಗೆ ಕೃಷಿ ಇಲಾಖೆ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿ ಸಹಿತ ಹಲವು ಕೃಷಿ ಪ್ರಶಸ್ತಿಗಳು ಕೂಡ ಲಭಿಸಿವೆ. ಬಹಳಷ್ಟು ಸವಾಲುಗಳ ನಡುವೆ ಈಗಲೂ ಭತ್ತದ ಕೃಷಿಯನ್ನು ಬಿಡದೇ ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಮಾಡುತ್ತಿರುವುದು ಗಮನಾರ್ಹ.
ಕೃಷಿ ಇಲಾಖೆ, ದ.ಕ. ಜಿಲ್ಲೆ ಇವರಿಗೆ 2013-14ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ಹೆಕ್ಟೇರಿಗೆ 83.49 ಕ್ವಿಂಟಾಲ್‌ ಇಳುವರಿ ಪಡೆದ ಕಾರಣಕ್ಕೆ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ಕೃಷಿ ಪ್ರಶಸ್ತಿಯನ್ನು ನೀಡಿದೆ. 2017-18ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿದೆ. 2018-19ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಇವರು ಪಡೆದಿದ್ದಾರೆ.
ಮೊಬೈಲ್‌ ಸಂಖ್ಯೆ: 9448180442

ಕೃಷಿಗೆ ಪೂರಕ ಕೈಗಾರಿಕೆ ಅಗತ್ಯ
ನನ್ನ ಮಗ ಹಾಗೂ ಮಗಳು ಕೂಡ ಭತ್ತ ಬೆಳೆಯುವುದಕ್ಕೆ ಸಾಥ್‌ ಕೊಡುತ್ತಿದ್ದಾರೆ. ಇದರಿಂದ ನಮಗೆ ಭತ್ತ ಬೆಳೆಯುವುದಕ್ಕೆ ತಗಲುವ ಖರ್ಚು ಕೂಡ ಕಡಿಮೆಯಾಗುತ್ತದೆ. ಭತ್ತದ ಕೃಷಿ ಯಲ್ಲಿಯೇ ನಮಗೆ 50 ಸಾವಿರ ಆದಾಯ ಬರಬಹುದು. ಕಟಾವಿಗೆ ಮೆಶಿನ್‌ನನ್ನು ಅಳವಡಿಕೆ ಮಾಡಲಾಗುತ್ತದೆ. ಭತ್ತದ ಕೃಷಿಗೆ ಸಾವಯವ ಗೊಬ್ಬರವೇ ಉಪಯೋಗ ಮಾಡಲಾಗುತ್ತದೆ. ಕೀಟಗಳಿಗೆ ಕಹಿ ಬೇವು ಎಣ್ಣೆ ಸ್ಪ್ರೆà ಮಾಡುತ್ತೇನೆ. ನಮ್ಮ ಎಕ್ಕಾರಿನಲ್ಲಿ 35 ಮಂದಿ ಸಾವಯವ ಕೃಷಿಕರಿದ್ದಾರೆ. ಕೃಷಿಗೆ ಪೂರಕವಾದ ಆದಾಯ ತರುವ ಕೈಗಾರಿಕೆಯ ಅಗತ್ಯವಾಗಿದೆ. ಇದರಿಂದ ಕೃಷಿಕರಿಗೆ ನಷ್ಟ ಕಡಿಮೆಯಾಗುತ್ತದೆ. ಯುವಕರು, ಯುವತಿಯರಿಗೆ ಉದ್ಯೋಗ ಭರವಸೆಯಾಗುತ್ತದೆ. ಸಾವಯವದಡಿ ಭತ್ತ ಬೆಳೆದರೆ ಪರಿಸರಕ್ಕೂ ಹಾನಿಯಿಲ್ಲ; ಆರೋಗ್ಯಕ್ಕೂ ತೊಂದರೆಯಿಲ್ಲ. ಭತ್ತದ ಕೃಷಿ ನಷ್ಟ ಎಂದು ಹೇಳುವವರಿಗೆ ಲಾಭ ಎಂದು ಹೇಳುವಂತೆ, ಮುಂಗಾರು ಬೆಳೆಗೆ ಗೇಣಿಗೆ ನೀಡುವ ಗದ್ದೆಗಳಿದ್ದರೆ ಭತ್ತದ ಬೇಸಾಯ ಮಾಡಲು ನಾನು ಸದಾ ಸಿದ್ಧ. ಕೃಷಿ ಇಲಾಖೆ ಸೂಚಿಸಿದರೆ ನಾನು ತರಬೇತಿ ನೀಡಲು ಸಿದ್ಧನಿದ್ದೆನೆ.
– ಶ್ಯಾಮ್‌ ಶೆಟ್ಟಿ,  ಭತ್ತ ಕೃಷಿಕ

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next