ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಪುತ್ರನಿಗೆ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ವಂಚಿಸಿದ್ದಾರೆಂದು ಆರೋಪಿಸಿ ನಿವೃತ್ತ ಆರ್‌ಎಸ್‌ಐಯೊಬ್ಬರು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶ್ಯಾಮ್ ಭಟ್ ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತುಮಕೂರಿನ ಕ್ಯಾತಸಂದ್ರ ನಿವಾಸಿ ನಿವೃತ್ತ ಆರ್‌ಎಸ್‌ಐ ಸಿದ್ದಯ್ಯ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶ್ಯಾಮ್‌ಭಟ್, ನಿವೃತ್ತ ಆರ್‌ಎಸ್‌ಐ ಪ್ರದೀಪ್, ಮಂಗಳೂರು ಜೆಡಿಎಸ್ ಮುಖಂಡ ಧನರಾಜ್ ವಿರುದ್ಧ ಉಪ್ಪಾರಪೇಟೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ವರ್ಷಗಳ(2017) ಹಿಂದೆ ಸಿದ್ದಯ್ಯ ಅವರು ಮೈಸೂರು ರಸ್ತೆಯಲ್ಲಿರುವ ಸಿಎಆರ್ ಕೇಂದ್ರದಲ್ಲಿ ಆರ್‌ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಆ ವೇಳೆ ಆರ್‌ಎಸ್‌ಐ ಆಗಿದ್ದ ಪ್ರದೀಪ್ ಅವರು ಸಿದ್ದಯ್ಯ ಮಗ ನಾಗೇಂದ್ರ ಎಂಬುವವರಿಗೆ ಅಬಕಾರಿ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿದ್ದರು.
ಈ ಸಂಬಂಧ ಜೆಡಿಎಸ್ ಮುಖಂಡ ಧನರಾಜ್ ಎಂಬುವರನ್ನೂ ಪರಿಚಯಿಸಿದ್ದರು. ಅನಂತರ ಧನಂಜಯ್, ಸಿದ್ದಯ್ಯ ಹಾಗೂ ಅವರ ಪುತ್ರ ನಾಗೇಂದ್ರರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶ್ಯಾಮ್‌ಭಟ್ ಅವರ ಬಳಿ ಕರೆದೊಯ್ದು, ಅಬಕಾರಿ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆ ಬಗ್ಗೆ ಮಾತುಕತೆ ನಡೆಸಿ 20 ಲಕ್ಷ ರೂ.ಗೆ ನಿಗದಿ ಮಾಡಲಾಗಿತ್ತು. ಅದನ್ನು ನಂಬಿದ ಸಿದ್ದಯ್ಯ ಅವರು ಹಣ ಕೊಡಲು ಒಪ್ಪಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೊದಲಿಗೆ 10 ಲಕ್ಷ ರೂ. ಕೊಡಬೇಕು. ಕೆಲಸ ಸಿಕ್ಕ ನಂತರ ಉಳಿದ 10 ಲಕ್ಷ ರೂ. ನೀಡಬೇಕು. ಜತೆಗೆ ವೈಯಕ್ತಿಕವಾಗಿ 5 ಲಕ್ಷ ರೂ. ನೀಡಬೇಕು ಎಂದು ಧನರಾಜ್ ಬೇಡಿಕೆ ಇಟ್ಟಿದ್ದರು. ಅದರಂತೆ 2017 ಜೂ.8 ರಂದು 4.50 ಲಕ್ಷ ರೂ. ನಗದು ಹಾಗೂ 2 ಲಕ್ಷ ರೂ. ಚೆಕ್ ಅನ್ನು ಧನರಾಜ್‌ಗೆ ಹಾಗೂ 3.50 ಲಕ್ಷ ರೂ.ವನ್ನು ಮೈಸೂರು ರಸ್ತೆಯಲ್ಲಿರುವ ನಿವಾಸದಲ್ಲಿ ಪ್ರದೀಪ್‌ಗೆ ಸಿದ್ದಯ್ಯ ಕೊಟ್ಟಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕೆಲ ದಿನಗಳ ಬಳಿಕ ಧನರಾಜ್‌ಗೆ ಸಂಪರ್ಕಿಸಿದಾಗ ಹಣವನ್ನು ಶ್ಯಾಮ್‌ಭಟ್ ಅವರಿಗೆ ಕೊಟ್ಟಿದ್ದೇನೆಂದು ಮಾಹಿತಿ ನೀಡಿದ್ದರು. ಅನಂತರ ಧನರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಶ್ಯಾಮ್ ಭಟ್ ಅವರ ಬಳಿ ವಿಚಾರಿಸಿದಾಗ, ಎರಡನೇ ಲಿಸ್ಟ್‌ನಲ್ಲಿ ಪುತ್ರನಿಗೆ ಕೆಲಸ ಗ್ಯಾರಂಟಿ ಆಗುತ್ತದೆ ಎಂದು ನಂಬಿಸಿದ್ದರು. ಆದರೆ, ವರ್ಷವಾದರೂ ಕೆಲಸ ಸಿಗದಿದ್ದಾಗ ಆತಂಕಗೊಂಡ ಸಿದ್ದಯ್ಯ, ಹಣ ಹಿಂದಿರುಗಿಸುವಂತೆ ಧನರಾಜ್‌ರನ್ನು ಕೇಳಿದಾಗ ವಿವಿಧ ಹಂತದಲ್ಲಿ ಮೂರು ಲಕ್ಷ ರೂ. ಹಣ ವಾಪಸ್ ನೀಡಿದ್ದಾರೆ.
ಆದರೆ, ಇನ್ನುಳಿದ 7 ಲಕ್ಷ ರೂ.ಕೊಡದೇ ಇಲ್ಲದ ಸಬೂಬು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮೇ 12ರಂದು ಸಿದ್ದಯ್ಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ಸದ್ಯದಲ್ಲೇ ಶ್ಯಾಮ್ ಭಟ್ ಸೇರಿ ಮೂವರು ಆರೋಪಿಗಳಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸಲಾಗುವುದು ಎಂದರು.