ರಚನ ಕ್ರೋಢಬೈಲೂರು ವತಿಯಿಂದ ಶ್ರೀಮಹಿಷಮರ್ದಿನಿ ದೇವಸ್ಥಾನದ ಶರನ್ನವರಾತ್ರಿಯ ಅಂಗವಾಗಿ ನಮ್ಮ ಯಕ್ಷಭೂಮಿ ಕನ್ಯಾನ ಸದಸ್ಯರು ಶ್ವೇತಕುಮಾರ ಯಕ್ಷಗಾನ ಆಯೋಜಿಸಿದ್ದರು.
ಕಿರಿಕ್ಕಾಡು ಮಾಸ್ಟರ್ ವಿಷ್ಣು ಭಟ್ ವಿರಚಿತ ಶ್ವೇತಕುಮಾರ ಚರಿತ್ರೆ ಶಿವ ಪಂಚಾಕ್ಷರಿ ಮಹಿಮೆಯ ಮಹತ್ವ ಸಾರುವ ಕಥಾನಕ. ಗಾನ-ನೃತ್ಯ, ವಾಚಿಕಕ್ಕೆ ಸವಾಲೆಸೆಯುವ ಈ ಕೃತಿ ಪೂರ್ಣ ಮನೋಲ್ಲಾಸಕಾರಿ. ಪ್ರತಿ ಪದ್ಯವನ್ನು ಮೊಗೆಬೆಟ್ಟು ಅವರು ಸತ್ವ ತುಂಬಿ ರಂಗದಲ್ಲಿ ಪಾತ್ರ ಸಚೇತನಗೊಳಿಸಿದ್ದಾರೆ. ತ್ರಿಲೋಕ ಸುಂದರಿಯ ಪ್ರವೇಶದ ತುಸು ದೂರದಿ ನವ| ಕುಸುಮ ಗಂಧವ ಪಸರಿಸಿ ಸುಮಗಳ ಕೊಯ್ಯುತಲಿ ಇರಬಹುದು, ನಾರೀ | ಬಲು ವೈ| ಯ್ನಾರಿ ನೀ ನಾರಿ ಆಗಿರಬಹುದು…, ಭಳಿರೆ ಯಮ ನಿನಗಿಂತು| ಪ್ರತಿಯೊಂದು ಸನ್ನಿವೇಶಗಳು ಅರ್ಥಗರ್ಭಿತವಾಗಿ ಮೂಡಿ ಬಂತು. ಜೊತೆಗೆ ಭಾಮಿನಿಯ ಇನಿತು ನುತಿಸುವ ಹಾಗೂ ಎನಲು ಯೋಚಿಸಿ ರಂಭೆ ಪದ್ಯಗಳು ಮತ್ತೆ ಮತ್ತೆ ಮಾರ್ದನಿಸಿದವು.
ಶ್ವೇತಕುಮಾರನ ಪಾತ್ರ ನಿರ್ವಹಿಸಿದ ಸುಮಲತಾ ಇಡೂರು ಆದಿಯಿಂದ ಅಂತ್ಯದ ತನಕ ರಸಭಂಗ ಮಾಡಲಿಲ್ಲ. ನಿಲುವು ಹಾಗೂ ವಾಚಿಕದ ಭಾವ ಸ್ಪುರಣ ಗಮನೀಯ. ನೃತ್ಯದಲ್ಲಿಯೂ ಕೂಡಾ ಮುದ್ರೆಯ ಬಳಕೆ, ತ್ರಿಲೋಕ ಸುಂದರಿಯ ಜೊತೆ ಸಂವಾದ, ಸಮರದ ಸನ್ನಿವೇಶಗಳು ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ.
ದುರ್ಜಯನಾಗಿ ಅಬ್ಬರದ ಪ್ರವೇಶ ಮಾಡಿದ ಜಗನ್ನಾಥ ಗಾಣಿಗ ಸಿಪಾಯಿಮನೆ ಸಾಂಪ್ರದಾಯಿಕ ಗತ್ತು, ಅದಟ್ಟುತನ, ಆಕ್ರೋಶ ವ್ಯಕ್ತ ಪಡಿಸುವಿಕೆ ಅತ್ಯುತ್ತಮ. ಪಾತ್ರ ವಿಸ್ತರಣೆಯ ತಿಳಿವಳಿಕೆ ಇವರಲ್ಲಿ ದಟ್ಟವಾಗಿರುವುದು ಕಂಡು ಬಂತು. ಸೋದರಿಯ ನುಡಿಗೆ ಕೆರಳುವ ಪರಿ, ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಿಕೆ ಉತ್ತಮ. ಪ್ರೇತವಾಗಿ ರಾಜು ನಾಯ್ಕ ಇಡೂರು ಒಂದಿಷ್ಟು ಕಚಗುಳಿ ಇಟ್ಟಿದ್ದಾರೆ. ನಾರಿ ಮಣಿ ರಂಭೆ ಕೇಳು ಪದ್ಯಕ್ಕೆ ಜೀವ ನೀಡಿದ್ದಾರೆ. ಹೆಣ್ಣು ಬಣ್ಣದ ವೇಷದ ಕರಾಳನೇತ್ರೆ( ಸುನಿಲ್ ಕುಮಾರ್ ಕಾವ್ರಾಡಿ) ಅವರದ್ದು ಶ್ಲಾಘನಾರ್ಹ ಪ್ರಯತ್ನ.
ತ್ರಿಲೋಕ ಸುಂದರಿಯಾಗಿ ಒನಪು-ಒಯ್ನಾರ, ಬೆಡಗು-ಬಿನ್ನಾಣಗಳನ್ನು ಪ್ರದರ್ಶಿಸಿ, ಮೋಹಕ ವಲಯವನ್ನೇ ಸುಕನ್ಯ ಕ್ರೋಢಬೈಲೂರು ಸೃಷ್ಟಿಸಿದ್ದಾರೆ. ತುಸು ದೂರದಿ ನವ… ಹಾಗೂ ಲೋಕೇಶಕುವರಿ ತ್ರೆçಲೋಕಸುಂದರಿಯು… ಪದ್ಯಗಳಿಗೆ ಉತ್ತಮ ಅಭಿನಯ ನೀಡಿದ್ದಾರೆ. ಈಶ್ವರನಾಗಿ ನಾಗರಾಜ ಶೆಟ್ಟಿ ಸಬ್ಲಾಡಿಯರದ್ದು ಪ್ರಬುದ್ಧ ಅಭಿನಯ. ಶ್ವೇತಕುಮಾರನ ಆತ್ಮ ಕರೆಯಲು ಬಂದ ಯಮನಿಗೂ, ಪಂಚಾಕ್ಷರಿ ಮಂತ್ರೋಚ್ಛಾರಣೆ ಮಾಡುತ್ತಿರುವ ಶ್ವೇತಕುಮಾರನಿಗೆ ಒಲಿದು ಬಂದ ಶಿವನಿಗೂ ಯುದ್ಧ, ಹರನಿಂದ ಪುನರ್ಜನ್ಮ ಈ ಸನ್ನಿವೇಶಗಳಲ್ಲಿ ನಾಗರಾಜ ಶೆಟ್ಟರ ಅಭಿನಯ, ಅಷ್ಟೇ ಸಮರ್ಥವಾಗಿ ಯಮನ ಪಾತ್ರಧಾರಿಯ ಹಠದ ಕರ್ತವ್ಯನಿಷ್ಠೆಯ ಸಂದಿಗ್ಧತೆ ಮೌಲಿಕವಾಗಿತ್ತು.
ಉಳಿದಂತೆ ನಾರದನಾಗಿ ಕವಿತಾ ಮಂಜುನಾಥ್, ಶೂರಸೇನನಾಗಿ ಪ್ರದೀಪ ಬಿಲ್ಲವ ಹಾಲ್ಕಲ್, ಮಣಿಬಿಂಬನಾಗಿ ಮಂಜುನಾಥ ಗುಡ್ಡೆಯಂಗಡಿ, ಶಿವೆಯಾಗಿ ಕಲಾವತಿ ಮಾರಣಕಟ್ಟೆ, ಲೋಹಿತನೇತ್ರನಾಗಿ ಶರತ್ ಮೊವಾಡಿ, ಸೀತಕೇತನಾಗಿ ಯೋಗೀಶ, ಯಮನಾಗಿ ಬೇಬಿ ಕನ್ಯಾನ, ಚಿತ್ರಗುಪ್ತನಾಗಿ ಪ್ರವೀಣ ಭಂಡಾರಿ, ಯಮದೂತನಾಗಿ ಸತೀಶ ಗಂಗೊಳ್ಳಿ, ವೀರಭದ್ರನಾಗಿ ಅವಿನಾಶ್ ಮಿಂಚಿದ್ದರು.
ಮೊಗೆಬೆಟ್ಟು ಅವರ ಭಾಗವತಿಕೆಗೆ ಚಂದ್ರಯ್ಯ ಆಚಾರ್ಯ ಹಾಲಾಡಿಯವರ ಮದ್ದಳೆ. ಕೃಷ್ಣಾನಂದ ಶೆಣೈ ಅವರ ಚಂಡೆಯ ಸಾಥ್ ಉತ್ತಮವಾಗಿತ್ತು. ಯುವಕ-ಯುವತಿಯರಿದ್ದ ಮುಮ್ಮೇಳ ಸ್ಪರ್ಧಾತ್ಮಕವಾಗಿ ಮೂಡಿಬಂತು.
ನಾಗರಾಜ ಬಳಗೇರಿ