ಗಾಯಕಿ ಮಂಜುಳಾ ಗುರುರಾಜ್ ಈಗ “ಶುಕ್ರ’ ಎಂಬ ಸಭಾಂಗಣ ನಿರ್ಮಿಸಿದ್ದಾರೆ. ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿರುವ ತಮ್ಮ ಸಾಧನಾ ಮ್ಯೂಸಿಕ್ ಸ್ಕೂಲ್‌ನ ನಾಲ್ಕನೇ ಮಹಡಿಯಲ್ಲಿ “ಶುಕ್ರ’ ಸಭಾಂಗಣ ತಲೆ ಎತ್ತಿದೆ.
ಸೋಮವಾರ ಆ ಸಭಾಂಗಣ ಉದ್ಘಾಟನೆಯಾಗಿದ್ದು,ಹಿರಿಯ ನಿರ್ದೇಶಕ ಟಿ.ಎಸ್ .ನಾಗಾಭರಣ ಹಾಗೂ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಆಡಿಟೋರಿಯಮ್ ಉದ್ಘಾಟಿಸಿ ಶುಭಕೋರಿದರು. ನಾಟಕ, ಸಂಗೀತ, ನೃತ್ಯ ಕಲಾವಿದರಿಗೆ ಈಗ ಸಭಾಂಗಣದ ಕೊರತೆ ಕಾಡುತ್ತಿದೆ. ಪ್ರತಿ ಏರಿಯಾಗಳಲ್ಲಿ
ಈ ತರಹದ ಸಭಾಂಗಣವಿದ್ದರೆ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಾಗುತ್ತದೆ.
ಆ ನಿಟ್ಟಿನಲ್ಲಿ ಮಂಜುಳಾ ಗುರುರಾಜ್ ಅವರು ಒಂದು ಉತ್ತಮ ಕೆಲಸ ಮಾಡಿದ್ದಾರೆ. ಈ ಆಡಿಟೋರಿಯಮ್‌ನಿಂದ ನೀವು ಹಣ ಮಾಡುತ್ತೀರಿ ಎಂದು ನಾನು ನಂಬೋದಿಲ್ಲ. ಆದರೆ ಒಂದಷ್ಟು ಪ್ರತಿಭೆಗಳನ್ನು ಮಾತ್ರ ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು “ಶುಕ್ರ’ ಆಡಿಟೋರಿಯಮ್‌ಗೆ ಶುಭಕೋರಿದರು.
ಮಂಜುಳಾ ಗುರುರಾಜ್ ಅವರು ಈ ರೀತಿಯ ಆಡಿಟೋರಿಯಮ್ ಮಾಡಲು ಕಾರಣ ಸುಗಮ ಸಂಗೀತ ಹಾಗೂ ಚಿತ್ರ ಸಂಗೀತಕ್ಕೆ ವೇದಿಕೆ ಕೊಡಲ್ಲ ಎಂದು ಕೆಲವು ಕಡೆ ನಿರಾಕರಿಸಿದ್ದು. ಆ ಕಾರಣಕ್ಕಾಗಿ ಈಗ ಮಂಜುಳಾ ಗುರುರಾಜ್ ಅವರೇ “ಶುಕ್ರ’ ಎಂಬ ವೇದಿಕೆ ನಿರ್ಮಿಸಿದ್ದಾರೆ. “ಅನೇಕ ಬಾರಿ ಸುಗಮ ಸಂಗೀತ, ಚಿತ್ರ ಸಂಗೀತದ ಪ್ರತಿಭೆಗಳನ್ನು ಪರಿಚಯಿಸಲು ವೇದಿಕೆಯೇ ಸಿಗೋದಿಲ್ಲ. ಅವುಗಳಿಗೆ ವೇದಿಕೆ ಕೊಡಲು ಅನೇಕರು ನಿರಾಕರಿಸಿದರು. ಆಗ ನಾನು, ಮುಂದೊಂದು ದಿನ ನಾವೇ ವೇದಿಕೆ ನಿರ್ಮಿಸುವ ಎಂದಿದ್ದೆ. ಅದು ಈಗ ನಿಜವಾಗಿದೆ’ ಎಂದು ಭಾವುಕರಾಗಿ ನುಡಿದರು.
“ಶುಕ್ರ’ ಸಭಾಂಗಣ ನಿರ್ಮಿಸೋದು ಮಂಜುಳಾ ಗುರುರಾಜ್ ಅವರ 2 ವರ್ಷದ ಕನಸಂತೆ. ಇನ್ನು, ಆಡಿಟೋರಿಯಮ್‌ಗೆ “ಶುಕ್ರ’ ಎಂಬ ಹೆಸರು ಸೂಚಿಸಿದ್ದು ಮಂಜುಳಾ ಗುರುರಾಜ್ ಅವರ ಪುತ್ರ ಸಾಗರ್. “ಇದು ಮಗ ಸೂಚಿಸಿದ ಹೆಸರು. ಈ ವೇದಿಕೆಗೆ ಬರುವ ಎಲ್ಲರಿಗೂ ಶುಕ್ರದೆಸೆ ಆರಂಭವಾಗಲಿ ಎಂಬ
ಆಸೆ ಕೂಡಾ ನಮ್ಮದು’ ಎಂದರು.