Advertisement

ಶುದ್ಧಿ ನಂತರ ಭಿನ್ನ

08:00 PM Apr 11, 2018 | |

“ಶುದ್ಧಿ’ ಎಂಬ ಜನಮನ್ನಣೆ ಪಡೆದ ಚಿತ್ರವನ್ನು ನಿರ್ದೇಶಿಸಿದ್ದ ಆದರ್ಶ್‌ ಈಶ್ವರಪ್ಪ, ಈಗ ಇನ್ನೊಂದು ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ. ಅವರ ಎರಡನೆಯ ಚಿತ್ರ ಜುಲೈನಿಂದ ಪ್ರಾರಂಭವಾಗಲಿದ್ದು, ಚಿತ್ರಕ್ಕೆ “ಭಿನ್ನ’ ಎಂಬ ಹೆಸರನ್ನಿಡಲಾಗಿದೆ. “ಶುದ್ಧಿ’ ತರಹ ಇದೂ ಒಂದು ಮಹಿಳಾ ಪ್ರಧಾನ ಚಿತ್ರವಾಗಲಿದೆಯಂತೆ.

Advertisement

ಜೊತೆಗೆ ಇದೊಂದು ಸೈಕಾಲಜಿಕಲ್‌ ಥ್ರಿಲ್ಲರ್‌ ಚಿತ್ರವಂತೆ. “ಉದಯೋನ್ಮುಖ ನಟಿಯೊಬ್ಬಳಿಗೆ ಒಂದು ಚಿತ್ರದಲ್ಲಿ ಅವಕಾಶ ಸಿಗುತ್ತದೆ. ಆ ಚಿತ್ರದ ಕಥೆಗೂ ಅವಳ ನಿಜಜೀವನಕ್ಕೂ ಒಂದು ಸಂಬಂಧವಿರುತ್ತದಂತೆ. ಆ ಸಂಬಂಧ ಏನು ಎಂಬುದನ್ನು ಚಿತ್ರ ಹೇಳಲಿದೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿರುವುದಿಲ್ಲ. ಸಿಂಕ್‌ಸೌಂಡ್‌ನ‌ಲ್ಲೇ ಚಿತ್ರೀಕರಣ ಮಾಡಲಿದ್ದೇವೆ’ ಎನ್ನುತ್ತಾರೆ ಆದರ್ಶ್‌.

ಕಳೆದ ವರ್ಷ “ಶುದ್ಧಿ’ ಬಿಡುಗಡೆಯಾದ ಮೇಲೆ ಅವರು ಈ ಚಿತ್ರದ ಕಥೆ ಬರೆಯುವುದಕ್ಕೆ ಶುರು ಮಾಡಿದ್ದಾರೆ. ಬರವಣಿಗೆ ಕೆಲಸ ಜನವರಿಯಲ್ಲಿ ಮುಗಿದಿದ್ದು, ಇದೀಗ ಪ್ರೀಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಆ ನಂತರ ರಿಹರ್ಸಲ್‌ ಎಲ್ಲಾ ಮುಗಿಸಿ, ಜುಲೈನಲ್ಲಿ ಚಿತ್ರವನ್ನು ಪ್ರಾರಂಭಿಸುವ ಯೋಚನೆ ಅವರದು. ಈ ಚಿತ್ರದ ಮೂಲಕ ಹೊಸ ನಟಿಯನ್ನು ಅವರು ಪರಿಚಯಿಸುತ್ತಿದ್ದು, ಅದ್ಯಾರು ಎಂಬುದನ್ನು ಫೋಟೋಶೂಟ್‌ ಮಾಡಿದ ನಂತರ ಬಹಿರಂಗಗೊಳಿಸಲಿದ್ದಾರಂತೆ.

ಮಿಕ್ಕಂತೆ ಸಾಕಷ್ಟು ಹೊಸಬರು ನಟಿಸುತ್ತಿದ್ದು, ಅವರಿಗೆಲ್ಲಾ ರಿಹರ್ಸಲ್‌ ಕೊಟ್ಟು, ಆ ನಂತರ ಚಿತ್ರ ಪ್ರಾರಂಭಿಸುವ ಯೋಚನೆ ಅವರದು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜೊತೆಗೆ ಸಂಕಲನವನ್ನೂ ಮಾಡಲಿದ್ದಾರೆ. ಪರ್ಪಲ್‌ ಆರೋ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಂಡ್ರೋ ಆಯಿಲೋ ಅವರ ಛಾಯಾಗ್ರಹಣ ಮತ್ತು ಜೆಸ್ಸಿ ಕ್ಲಿಂಟನ್‌ ಅವರ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next