ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷದ ಸಾಧನೆ ಕುರಿತಾದ ಶುದ್ಧ ನಡೆ ಸೂಕ್ತ ವಿಕಾಸ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ಎಂಬ ಧ್ಯೇಯದೊಂದಿಗೆ ವಿಕಾಸವೊಂದೇ ಜನರನ್ನು ಬೆಸೆಯುವ ಏಕೈಕ ಮಂತ್ರ ಎಂಬಂತೆ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಹಾಗಾಗಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರು ರಾಜ್ಯಗಳಲ್ಲಿದ್ದ ಬಿಜೆಪಿ, ಇಂದು 20 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮೋದಿ ಸರ್ಕಾರದ ಸಾಧನೆಯನ್ನು ಮನೆ, ಮನೆಗೆ ತಲುಪಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಸಾಧನೆಯನ್ನು ತಿಳಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ಮೋದಿ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ತರಲಾಗಿದೆ. ಕಾರ್ಯಕರ್ತರು ಇದನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲಿದ್ದಾರೆ ಎಂದು ಹೇಳಿದರು.
Advertisement
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ ಇತರರು ಉಪಸ್ಥಿತರಿದ್ದರು.
ಜೂ.29ರಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಎಲ್ಲ ಶಾಸಕರು, ಸಂಸದರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮನೆ, ಮನೆಗೆ ಕಿರುಹೊತ್ತಿಗೆ ತಲುಪಿಸುವುದರ ಜತೆಗೆ ಅಧ್ಯಯನ ಮಾಡಿ ಜನರಿಗೆ ತಿಳಿಸುವಂತೆಯೂ ಕೋರಲಾಗುವುದು. ಹಾಗೆಯೇ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುವುದು. ಬಿ.ಜೆ.ಪುಟ್ಟಸ್ವಾಮಿಯವರು ಸಿಟ್ಟಿನಲ್ಲಿ ಮಾತನಾಡಿದ್ದು, ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ಷರತ್ತು ವಿಧಿಸಿ ಮುಖ್ಯಮಂತ್ರಿಯಾಗಬೇಕಿತ್ತು!
ತಮ್ಮ ಪಕ್ಷದ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸಲು ಒಪ್ಪಿದರಷ್ಟೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಷರತ್ತು ವಿಧಿಸಬೇಕಿತ್ತು. ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸಾಕಷ್ಟು ಭರವಸೆ ನೀಡಿದ್ದರು. ಅದನ್ನು ನಂಬಿ 37 ಅಭ್ಯರ್ಥಿಗಳನ್ನು ಜನ ಗೆಲ್ಲಿಸಿದ್ದಾರೆ. ರೈತರು, ಕೃಷಿ ಕಾರ್ಮಿಕರು, ದೀನ ದಲಿತರು ಹಾಗೂ ಸಾಮಾನ್ಯರಿಗೆ ನೀಡಿರುವ ಭರವಸೆಯನ್ನು ಕುಮಾರಸ್ವಾಮಿಯವರು 24 ಗಂಟೆಯಲ್ಲಿ ಜಾರಿಗೊಳಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ನಾವು ಕೂಡ ಅದೇ ನಿರೀಕ್ಷೆಯಲ್ಲಿದ್ದು, 15 ದಿನಗಳಿಂದ ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕಾದು ನೋಡುತ್ತಿದ್ದೇನೆ. ನಾನು ಅನಗತ್ಯವಾಗಿ ಕಲ್ಪಿಸಿಕೊಂಡು ಮಾತನಾಡುವುದಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಸರ್ಕಾರ ಅವರ ಕೈಯಲ್ಲೇ ಇದೆ. ಸಿಐಡಿ, ಲೋಕಾಯುಕ್ತ, ಎಸಿಬಿ ಮೂಲಕ ತನಿಖೆ ನಡೆಸಲಿ. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಕುಂಟು ನೆಪ ಹೇಳುವ ಬದಲಿಗೆ ದಾಖಲೆ ಬಿಡುಗಡೆ ಮಾಡಲಿ. ನಾನು ಸ್ವಾಗತಿಸುತ್ತೇನೆ ಎಂದು ಬಿಎಸ್‌ವೈ ಹೇಳಿದರು.
Related Articles
ಹಿಂದಿನ ಸರ್ಕಾರ ಕಾವೇರಿ ವಿಚಾರದಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ. ಹಾಲಿ ಸರ್ಕಾರ ಎಚ್ಚರ ವಹಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕಾರ್ಯ ನಡೆದಿದೆ. ರಾಜ್ಯ ಸರ್ಕಾರದ ಪ್ರತಿನಿಧಿ ಆಯ್ಕೆ ಮಾಡುವಲ್ಲಿಯೂ ನಾವು ವಿಫಲರಾಗಿದ್ದೇವೆ. ಕಾವೇರಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ಜತೆಗಿರಲಿದೆ. ರೈತರ ಹಿತದೃಷ್ಟಿಯಿಂದ ಸಹಕಾರ ನೀಡಲು ಸಿದ್ಧ. ಇದರಲ್ಲಿ ರಾಜಕಾರಣ ಮಾಡದೆ ಸಮಸ್ಯೆ ಬಗೆಹರಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಮಂಡಳಿಗೆ ರಾಜ್ಯದಿಂದ ಸೂಕ್ತ ತಜ್ಞರನ್ನು ಪ್ರತಿನಿಧಿಯನ್ನಾಗಿ ನೇಮಿಸಬೇಕಿತ್ತು. ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
Advertisement
ಹೊಸದಾಗಿ ನಿರ್ಮಾಣವಾಗಿರುವ ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ನಡೆದಿರುವ ಪ್ರಯತ್ನ ಖಂಡನೀಯ. ಬೇಕಿದ್ದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿಡಲಿ. ಅದನ್ನು ಬಿಟ್ಟು ಅನಗತ್ಯವಾಗಿ ಶಾಂತವಾಗಿರುವ ಕರ್ನಾಟಕದ ವಾತಾವರಣವನ್ನು ಕಲುಷಿತಗೊಳಿಸಲು ಪ್ರಯತ್ನ ಮಾಡಬಾರದು.– ಬಿ.ಎಸ್.ಯಡಿಯೂರಪ್ಪ , ಪ್ರತಿಪಕ್ಷ ನಾಯಕ