ಹೊಸದಿಲ್ಲಿ: ಭಾರತದ ಭರವಸೆಯ ಬ್ಯಾಟ್ಸ್ ಮ್ಯಾನ್ ಗಳಾದ ಶುಭಮನ್ ಗಿಲ್, ಇಶಾನ್ ಕಿಶನ್ ಅವರು ಐಸಿಸಿ ಏಕದಿಂದ ರ‍್ಯಾಂಕಿಂಗ್ ನಲ್ಲಿ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕ ಬುಧವಾರ ಬಿಡುಗಡೆಯಾಗಿದ್ದು, ಸೋಮವಾರ ನೇಪಾಲ ವಿರುದ್ಧ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಅಜೇಯ 67 ರನ್ ಗಳಿಸುವ ಮೂಲಕ ಗಿಲ್ 750 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಿಗಿಂತ 27 ಅಂಕಗಳಿಂದ ಹಿಂದುಳಿದಿದ್ದಾರೆ.
ಮತ್ತೊಂದೆಡೆ, ಪಲ್ಲೆಕೆಲೆಯಲ್ಲಿ ನಡೆದ ಟೂರ್ನಮೆಂಟ್‌ನ ಆರಂಭಿಕ ಕೂಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ಧ 82 ರನ್ ಗಳಿಸಿದ ಕಿಶನ್, 624 ರೇಟಿಂಗ್ ಪಾಯಿಂಟ್‌ಗಳೊಂದಿಗೆ 12 ಸ್ಥಾನಗಳ ಏರಿಕೆಯೊಂದಿಗೆ 24 ನೇ ಸ್ಥಾನಕ್ಕೆ ತಲುಪಿದ್ದಾರೆ. ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಕ್ರಮವಾಗಿ 10 ಮತ್ತು 11ನೇ ಸ್ಥಾನದಲ್ಲಿದ್ದಾರೆ.
ಮುಲ್ತಾನ್‌ನಲ್ಲಿ ನಡೆದ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ 151 ರನ್ ಗಳಿಸಿದ ನಂತರ ಪಾಕಿಸ್ಥಾನದ ನಾಯಕ ಬಾಬರ್ ಅಜಮ್ 882 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಬೌಲರ್‌ಗಳ ಪೈಕಿ, ವೇಗಿ ಮೊಹಮ್ಮದ್ ಸಿರಾಜ್ 652 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (614) 12 ನೇ ಸ್ಥಾನದಲ್ಲಿದ್ದಾರೆ ಮತ್ತು ತಂಡಕ್ಕೆ ಹಿಂದಿರುಗಿರುವ ವೇಗಿ ಜಸ್ಪ್ರೀತ್ ಬುಮ್ರಾ 35 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ವೇಗಿ ಜೋಶ್ ಹೇಜಲ್‌ವುಡ್ 705 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬೌಲಿಂಗ್ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ, ಹಾರ್ದಿಕ್ ಪಾಂಡ್ಯ 220 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಹತ್ತನೇ ಸ್ಥಾನದಲ್ಲಿದ್ದು, ಅಗ್ರ 20 ರಲ್ಲಿ ಏಕೈಕ ಭಾರತೀಯನಾಗಿ ಉಳಿದಿದ್ದಾರೆ. ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (372) ಆಗ್ರ ಸ್ಥಾನದಲ್ಲಿದ್ದಾರೆ.