“ರಾತ್ರಿ’ ಕಳೆದ ದಿನಗಳ ಬಗ್ಗೆ ಯಾರೊಬ್ಬರೂ ಹೇಳಿಕೊಳ್ಳುವುದಿಲ್ಲ. ಆದರೆ, ಈ ವಿಷಯದಲ್ಲಿ ಶುಭಾ ಪೂಂಜಾ ಮಾತ್ರ, ಕ್ಲಿಯರ್ ಕಟ್. ಅವರು ಕಳೆದ ಆ ನಲವತ್ತು ರಾತ್ರಿಗಳ ಅನುಭವದ ಬಗ್ಗೆ ಮನಸಾರೆ ಹಾಡಿಕೊಂಡಿದ್ದಾರೆ! ಅರೇ, ಶುಭಾ ಪೂಂಜಾ ಯಾವ ರಾತ್ರಿ ಕುರಿತು ಹೇಳಿಕೊಂಡಿದ್ದಾರೆ, ಅಸಲಿಗೆ ವಿಷಯ ಏನು? ಸಾಮಾನ್ಯವಾಗಿ ಈ ಪ್ರಶ್ನೆ ಕಾಡದೇ ಇರದು. ಶುಭಪೂಂಜ ಕಳೆದ 40 ರಾತ್ರಿಗಳ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಅಪಾರ್ಥ ಮಾಡಿಕೊಳ್ಳುವ ವಿಷಯವೂ ಅಲ್ಲ. ಯಾಕೆಂದರೆ, ಇದು ಸಿನಿಮಾ ವಿಷಯ. “ಕೆಲವು ದಿನಗಳ ನಂತರ’ ಚಿತ್ರದಲ್ಲಿ ಶುಭಪೂಂಜ ನಟಿಸಿದ್ದು, ಅದೊಂದು ಹಾರರ್ ಚಿತ್ರ ಆಗಿರುವುದರಿಂದ ಶುಭಪೂಂಜ, ತಮ್ಮ ವೃತ್ತಿ ಬದುಕಿನಲ್ಲೇ ಅತಿ ಹೆಚ್ಚು ರಾತ್ರಿಗಳನ್ನು ಕಳೆದ ಚಿತ್ರವೆಂದರೆ, “ಕೆಲವು ದಿನಗಳ ನಂತರ’ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಶುಭಪೂಂಜ ಹೇಳಿದ್ದೇನು ಗೊತ್ತಾ? “ಈ ಹಿಂದೆ ನಾನು “ಜಯಮಹಲ್’ ಎಂಬ ಹಾರರ್ ಚಿತ್ರದಲ್ಲಿ ನಟಿಸಿದ್ದೇನೆ.
“ಕೆಲವು ದಿನಗಳ ನಂತರ’ ನನ್ನ ಎರಡನೇ ಹಾರರ್ ಚಿತ್ರ. ಈ ಚಿತ್ರದಲ್ಲಿ ಹೆಚ್ಚು ರಾತ್ರಿ ಕೆಲಸ ಮಾಡಿದ್ದು ಹೈಲೆಟ್. ಹಾಗೆ ಹೇಳುವುದಾದರೆ, ನನ್ನ ಇದುವರೆಗಿನ ಚಿತ್ರ ಬದುಕಿನಲ್ಲಿ ಈ ಚಿತ್ರದಲ್ಲೇ ಜಾಸ್ತಿ ರಾತ್ರಿ ಕೆಲಸ ಮಾಡಿದ್ದೇನೆ. ಬಹುತೇಕ ದೇವರಾಯನ ದುರ್ಗ ಕಾಡಿನ ನಡುವೆ ರಾತ್ರಿ ವೇಳೆ ಚಿತ್ರೀಕರಣ ನಡೆದಿದೆ. ಸಂಜೆ 6 ರಿಂದ ಮುಂಜಾನೆ 6 ರವರೆಗೆ ಪ್ರತಿಯೊಬ್ಬರೂ ಕೆಲಸ ಮಾಡಿದ್ದಾರೆ.
ಹೆಚ್ಚು ರಾತ್ರಿಗಳನ್ನು ಕಳೆದ ಚಿತ್ರವಾದ್ದರಿಂದ ಅದು ಶುಭರಾತ್ರಿಯೂ ಹೌದು, “ಶಿವರಾತ್ರಿ’ಯೂ ಹೌದು. ಕಾಡಿನ ಮಧ್ಯೆ, ಮಳೆ ನಡುವೆ ಮಧ್ಯರಾತ್ರಿ ಚಿತ್ರೀಕರಣ ಮಾಡಿದ್ದು ಭಯಂಕರ ಅನುಭವ ಆಗಿದೆ. ಹಾರರ್ ಚಿತ್ರ ಅಂದಮೇಲೆ ದೆವ್ವ ಇರಲೇಬೇಕು. ಹಾಗಂತ ನಾನು ದೆವ್ವನಾ? ಅದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲೊಂದು ಮಗು ಇದೆ. ಅದೇ ಭಯ ಹುಟ್ಟಿಸುತ್ತೆ. ಯಾಕೆ ಅನ್ನೋದು ಚಿತ್ರದಲ್ಲೇ ಕಾಣಬೇಕು ಎಂಬುದು ಅವರ ಮಾತು.
“ಕೆಲವು ದಿನಗಳ ನಂತರ’ ಚಿತ್ರವನ್ನು ಜನರು ಯಾಕೆ ನೋಡಬೇಕು? ಈ ಬಗ್ಗೆ ಹೇಳುವ ಶುಭಪೂಂಜ, ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಆದರೆ, ನಿರ್ದೇಶಕ ಶ್ರೀನಿ ಅವರು, ಹಾರರ್ ಜೊತೆಗೊಂದು ಸಂದೇಶ ಕೊಟ್ಟಿದ್ದಾರೆ. ಅದು ಯುವಕರಿಗೆ ಅನ್ನೋದು ವಿಶೇಷ. ನಾನು ಸಿನಿಮಾ ನೋಡಿದಾಗ, ಭಯಗೊಂಡಿದ್ದು ನಿಜ, ಪಕ್ಕದ್ದಲ್ಲಿದ್ದ ನಟ ಪವನ್‌ಗೆ ಪರಚಿದ್ದನ್ನೂ ಹೇಳಿಕೊಳ್ಳುವ ಶುಭ, ಚಿತ್ರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾಣಿಸಿಕೊಂಡಿದ್ದಾರಂತೆ.
ಇನ್ನು, ಗರ್ಭಿಣಿ ಮಹಿಳೆಯರು, ಹೃದಯಾಘಾತಕ್ಕೆ ತೊಂದರೆಗೊಳಗಾದವರು “ಕೆಲವು ದಿನಗಳ ನಂತರ’ ಚಿತ್ರ ನೋಡುವಂತಿಲ್ಲ ಎನ್ನುವ ಅವರು, ಭಯಪಡಿಸುವ ಅಂಶಗಳು ಹೆಚ್ಚಿರುವುದರಿಂದ ಸಮಸ್ಯೆ ಜಾಸ್ತಿ ಎನ್ನುತ್ತಾರೆ. ಎಲ್ಲಾ ಸರಿ, ಶೀರ್ಷಿಕೆಗೂ ಕಥೆಗೂ ಸಂಬಂಧವೇನು? ಎಲ್ಲದ್ದಕ್ಕೂ ಚಿತ್ರ ನೋಡಿದ ಮೇಲೆ ಉತ್ತರ ಸಿಗುತ್ತೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಶುಭ.