ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಾಂತರಂಗದ 80ನೇ ಸರಣಿ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಖ್ಯಾತಿಯ ನೃತ್ಯ ಗುರು ರಮಾ ವೈದ್ಯನಾಥನ್ ಮತ್ತು ಸನಾತನ ನಾಟ್ಯಾಲಯದ ನೃತ್ಯ ಗುರು ವಿದೂಷಿ ಶಾರದಾಮಣಿಶೇಖರ ಅವರ ಪುತ್ರಿ ಕು| ಶುಭಾಮಣಿ ಚಂದ್ರಶೇಖರ್ ಅವರ ನೃತ್ಯ ಕಾರ್ಯಕ್ರಮವು ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯವನ್ನು ಹೇಗೆ ಸಾಮಾನ್ಯ ಜನರೊಂದಿಗೆ ಸಂವಹನದ ಮೂಲಕ ತಲುಪಿಸಬಹುದೆಂಬುದಕ್ಕೆ ನಿದರ್ಶನವಾಯಿತು.
ಕಾರ್ಯಕ್ರಮವು ಅಪರೂಪವಾಗಿ ಪ್ರದರ್ಶನಗೊಳ್ಳುವ ನೃತ್ಯ ಬಂಧತಿರುವಂಪಾವೈಯಿಂದ ಆರಂಭಗೊಂಡಿತು. ಧರ್ನುಮಾಸ (ಮಾರ್ಗೈ)ದಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನದಲ್ಲಿ ವಿಶೇಷವಾಗಿ ಮದುವೆಯಾಗದ ಕನ್ನಿಕೆಯರು ಉತ್ತಮ ಪತಿ ಸಿಗಬೇಕೆಂದು, ವ್ರತವನ್ನು ಆಚರಿಸಿ ಭಗವಂತನನ್ನು ಪ್ರಾರ್ಥಿಸುವ ಸನ್ನಿವೇಶವನ್ನು ನೃತ್ಯಾಂಗನೆ ಚುರುಕು ಗತಿಯೊಂದಿಗೆ, ನೃತ್ಯ ಬಂಧದ ಗುಣಲಕ್ಷಣಗಳಿಗೆ ಪೂರಕವಾಗಿ ಅಭಿನಯಿಸಿದರು.
ಅನಂತರ ಪ್ರಸ್ತುತಿಗೊಂಡ ನೃತ್ಯ ಬಂಧ ಬೈರವಿ ರಾಗದ ರೂಪಕ ತಾಳದಲ್ಲಿರುವ ತಂಜಾವೂರು ಆಸ್ಥಾನ ಕವಿಯಿಂದ ರಚಿಸಲ್ಪಟ್ಟ ಪದವರ್ಣ. ನರ್ತಕಿಗೆ ಇರಬೇಕಾದ ಅತಃಪ್ರಾಣಗಳ ಬಳಕೆ, ಪ್ರೌಢಿಮೆ, ಸಾಧನೆಯ ಪರಿಚಯ, ಗುರುಗಳ ಪಾಠ ಮಾಡಬಲ್ಲ ಸಾಮಾರ್ಥ್ಯ ಎಲ್ಲಾ ವಿಮರ್ಶೆಗಳು ವರ್ಣ ಪ್ರದರ್ಶನದಲ್ಲಿ ಮೂಡಿ ಬರುತ್ತದೆ. ಈ ಎಲ್ಲಾ ಅಂಶಗಳ ಸ್ಪಷ್ಟನೆ ನೃತ್ಯಾಂಗನೆಯ ನೃತ್ಯದಲ್ಲಿ ಮೂಡಿ ಬಂತು. ಕ್ಲಿಷ್ಟಕರ ಜತಿಗಳ ಸಮರ್ಥ ನಿರ್ವಹಣೆ, ಸರಳ, ಸ್ಪಷ್ಟ , ನಿರಾಯಾಸ ಅಭಿನಯ ಕಲಾರಸಿಕರಿಗೆ ರಂಜನೆ ಉಂಟು ಮಾಡಿತು. ಅನಂತರ ಮೂಡಿ ಬಂದ ನೃತ್ಯ ಸ್ವಾತಿ ತಿರುನಾಳ್‌ರಿಂದ ರಚಿಸಲ್ಪಟ್ಟ ಬೆಹಾಗ್ ರಾಗದಲ್ಲಿರುವ ರಮಾ ವೈದ್ಯನಾಥನ್ ನೃತ್ಯ ಸಂಯೋಜಿಸಿದ ನೃತ್ಯದಲ್ಲಿ ಕೃಷ್ಣನ ಬಾಲ್ಯದ ತುಂಟಾಟವನ್ನು ಸಲಿಲವಾಗಿ ನರ್ತಿಸಿದರು.
ಕೊನೆಯಲ್ಲಿ ಕಲ್ಯಾಣಿರಾಗದ ಸದ್ದು ಮಾಡಲು ಬೇಡ ಎಂಬ ದೇವರನಾಮದಲ್ಲಿ ರಾತ್ರಿಯ ಹೊತ್ತು ಕೊಳಲನ್ನೂದುತ್ತಿದ್ದ ಕೃಷ್ಣನಲ್ಲಿ ಗೋಪಿಕೆಯರು ನಿನ್ನ ಕೊಳಲ ನಾದವನ್ನು ಕೇಳುವ ಸಮಯ ಇದಲ್ಲ ಎಂದು ಪರಿಪರಿಯಾಗಿ ಭಿನ್ನವಿಸಿಕೊಂಡರೂ ಕೇಳದ ಕೃಷ್ಣನಿಂದ ಕೊಳಲನ್ನು ಕಸಿದುಕೊಳ್ಳುವ ಸನ್ನಿವೇಶವನ್ನು ಮನೋಜ್ಞವಾಗಿ ಅಭಿನಯಿಸಿದರು. ಉನ್ನತ ಗುಣಮಟ್ಟದ ಧ್ವನಿ ಮುದ್ರಿಕೆ, ಸಹೃದಯಿ ಕಲಾರಸಿಕರ ಇರುವು ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಯಿತು.
ವಿ|ಡಾ| ಶೋಭಿತಾ ಸತೀಶ್