ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಕ್ಕಿಂತ ಹೆಚ್ಚಾಗಿ ಬೇರೆ ಬೇರೆ ವಿಷಯಗಳು ಮತ್ತು ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದವರು ನಟಿ ಶ್ರುತಿ ಹರಿಹರನ್. ವೈಯಕ್ತಿಕ ಕಾರಣಗಳಿಂದಾಗಿ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಶ್ರುತಿ ಹರಿಹರನ್ ಈ ವರ್ಷ ಮತ್ತೆ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಂಡಿದ್ದಾರೆ.
ಈಗಾಗಲೇ ನಟ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದರ ನಡುವೆಯೇ ಸದ್ದಿಲ್ಲದೆ ಶ್ರುತಿ ಹರಿಹರನ್ “ಸಾರಾಂಶ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಕೂಡ ಇದೀಗ ತೆರೆಗೆ ಬರಲು ಸಿದ್ದವಾಗುತ್ತಿದೆ. ಸೂರ್ಯ ವಸಿಷ್ಠ ನಿರ್ದೇಶನದ “ಸಾರಾಂಶ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಈ ಸಿನಿಮಾದ “ನಶೆಯೋ ನಕಾಶೆಯೋ…’ ಎಂಬ ವಿಡಿಯೋ ಹಾಡು ಬಿಡುಗಡೆಯಾಗಿದೆ.
ಈ ಹಾಡಿನಲ್ಲಿ ನಟಿ ಶ್ರುತಿ ಹರಿಹರನ್ ಹೆಜ್ಜೆ ಹಾಕುತ್ತ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಉದಿತ್ ಹರಿತಾಸ್ ಸಂಗೀತ ನಿರ್ದೇಶನವಿದೆ. ರಾಮ್ ಕುಮಾರ್ ನೃತ್ಯ ಸಂಯೋಜಿಸಿರುವ ಈ ಗೀತೆಗೆ ಶ್ರುತಿ ಹರಿಹರನ್ ಹೆಜ್ಜೆ ಹಾಕಿದ್ದು, ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಅನ್ನು ಕೂಡಾ ಚಿತ್ರತಂಡ ಪರಿಚಯಿಸಿದೆ.
■
ಉದಯವಾಣಿ ಸಿನಿ ಸಮಾಚಾರ