ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಮುಂಬರುವ ಚಿತ್ರ “ಸಲಾರ್’ಗೆ ನಾಯಕಿಯಾಗಿ ಶ್ರುತಿ ಹಾಸನ್ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಶ್ರುತಿ ಹಾಸನ್ ಸುಮಾರು ನಾಲ್ಕು ವರ್ಷದ ಹಿಂದೆ ಮಾಡಿದ್ದ ಟ್ವೀಟ್ ಈಗ ಮತ್ತೆ ವಿವಾದ ಸ್ವರೂಪ ಪಡೆದುಕೊಂಡಿದೆ.
2017ರಲ್ಲಿ ಶ್ರುತಿ ಹಾಸನ್ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಶ್ರುತಿ ಹಾಸನ್, “ಕನ್ನಡ ಸಿನಿಮಾದಲ್ಲಿ ನಟಿಸುವ ಯಾವುದೇ ಪ್ಲಾನ್ ಇಲ್ಲ. ಈ ಬಗ್ಗೆ ಯಾರ ಜೊತೆಯೂ ಚರ್ಚೆ ಮಾಡಿಲ್ಲ’ ಎಂದಿದ್ದರು.
ಈ ಟ್ವೀಟ್ ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ “ಸಲಾರ್’ ಚಿತ್ರಕ್ಕೆ ಶ್ರುತಿ ಆಯ್ಕೆಯಾಗುತ್ತಿದ್ದಂತೆ, ಈ ಟ್ವೀಟ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಸಿನಿಮಾ ಮಾಡಲ್ಲ ಎಂದು ಹೇಳಿ ಈಗ ಮತ್ತೇಕೆ “ಸಲಾರ್’ ಸಿನಿಮಾದಲಿ ನಟಿಸುತ್ತಿದ್ದೀರಿ? ಅಂದು ಬೇಡ ಎಂದವರು ಇಂದು ಯಾಕೆ ಕನ್ನಡ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೀರ? ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಶ್ರುತಿ ಹಾಸನ್ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ಬೆಡಗಿ ಮೋನಲ್ ಗಜ್ಜರ್ ಹಾಟ್ & ಬೋಲ್ಡ್ ಲುಕ್ಸ್
ಈ ವಿಷಯ ಟ್ವಿಟ್ಟರ್‌ನಲ್ಲಿ ಕಾವು ಪಡೆದುಕೊಳ್ಳುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ನಟಿ ಶ್ರುತಿ ಹಾಸನ್ ಈ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಇಂಗ್ಲಿಷ್ ವೆಬ್ ಪೋರ್ಟಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಶ್ರುತಿ, “ನಾನು “ಸಲಾರ್’ ಸಿನಿಮಾ ಮಾಡಲು ಬಗ್ಗೆ ತುಂಬಾ ಕಾತುರಳಾಗಿದ್ದೇನೆ. ಕನ್ನಡ ಚಿತ್ರರಂಗದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅದ್ಭುತವಾದ ತಂಡ ಮತ್ತು ನನಗೆ ಉತ್ತಮ ಅನುಭವಕೊಡುತ್ತಿದೆ. ಈ ಹಿಂದೆ ಕೂಡ ನನಗೆ ಕನ್ನಡ ಸಿನಿಮಾ ಮಾಡುವ ಅವಕಾಶ ಬಂದಿತ್ತು. ಆದರೆ ಡೇಟ್ ಮತ್ತು ಇನ್ನಿತರ ಕಾರಣಗಳಿಗೆ ಸಾಧ್ಯವಾಗಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:3 ವರ್ಷದ ಪರಿಶ್ರಮಕ್ಕೆ ಫಲ ಸಿಗೋ ಸಮಯವಿದು: ಪೊಗರು ಬಗ್ಗೆ ನಿರ್ದೇಶಕ ನಂದಕಿಶೋರ್ ಮಾತು
ಅಷ್ಟೇ ಅಲ್ಲದೆ, “ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನನ್ನ ತಂದೆ ಕಾಮಲ್ ಹಾಸನ್ ಕೂಡ ನಾನು ಬೇರೆ ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡುವುದನ್ನು ನೋಡಲು ಖುಷಿಪಡುತ್ತಾರೆ’ ಎಂದಿದ್ದಾರೆ.
ಇದೇ ವೇಳೆ ನಾಲ್ಕು ವರ್ಷದ ಹಿಂದೆ ಮಾಡಲಾಗಿದ್ದ ತಮ್ಮ “ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳ ಲಾಗಿದೆ’ಎಂದಿರುವ ಶ್ರುತಿ, “ನನಗೆ ಎಲ್ಲಾ ಚಿತ್ರರಂಗದ ಬಗ್ಗೆ ಅತಿಯಾದ ಗೌರವವಿದೆ. ನಾನು ಯಾವಾಗಲು ಸಕಾರಾತ್ಮಕ ಕೆಲಸ ಮತ್ತು ಶಕ್ತಿಗಳ ಕಡೆ ಹೆಚ್ಚು ಗಮನ ಕೊಡುತ್ತೇನೆ’ ಎಂದಿದ್ದಾರೆ. ಒಟ್ಟಾರೆ ಸದ್ಯಕ್ಕೆ ತಮ್ಮ ಟ್ವೀಟ್ ವಿವಾದ ಶ್ರುತಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ಮುಂದೇನಾಗುತ್ತದೆ ಅನ್ನೋದನ್ನ ಕಾದು ನೋಡಬೇಕು