ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಬೃಂದಾವನದಲ್ಲಿರುವ ಗಾಜಿನ ಲೋಕದಲ್ಲಿ ಪುಷ್ಪಲೋಕವೇ ಸೃಷ್ಟಿಯಾಗಿದೆ. ಹಲವು ಮಾದರಿಯ ಹೂವುಗಳ ಕಂಪು ಎಲ್ಲೆಡೆ ಹರಡಿದೆ.
ಅರಳಿನಿಂತಿರುವ ಹೂವುಗಳು ಸುಗಂಧಯುಕ್ತ ಪರಿಮಳ ಬೀರುತ್ತಾ ಸೊಬಗಿನ ಸಿರಿಯಂದ ಪ್ರೇಕ್ಷರನ್ನು ಕರೆಯುತ್ತಿದೆ. ಗಾಜಿನ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಹೂವುಗಳು ಸ್ವಾಗತಿಸುತ್ತವೆ. ಅರಳಿದ ಹೂವುಗಳಿರುವ ಕುಂಡಗಳನ್ನು ವ್ಯವಸ್ಥಿತ ಹಾಗೂ ಶಿಸ್ತುಬದ್ಧವಾಗಿ ಜೋಡಿಸಿಟ್ಟು ಆಕರ್ಷಣೆಯನ್ನು ಹೆಚ್ಚಿಸಲಾಗಿದೆ.
ಮೆಟ್ಟಿಲುಗಳನ್ನು ಇಳಿಜಾರಿನಂತೆ ನರ್ಮಿಸಿ ಒಂದೊಂದು ಸಾಲಿಗೂ ಒಂದೊಂದು ಮಾದರಿಯ ಪುಷ್ಪಗಳನ್ನು ಜೋಡಿಸಿಟ್ಟು ಅಲಂಕಾರ ಮಾಡಿರುವುದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಅರಳಿದ ಪುಷ್ಪರಾಶಿಯ ನಡುವೆ ವಿವಿಧ ಪಕ್ಷಿಗಳು, ಸಾರೋಟಿನಲ್ಲಿ ಆಗಮಿಸುತ್ತಿರುವ ಮಹಾರಾಜರು ಸೇರಿದಂತೆ ಹಲವು ಕಲಾಕೃತಿಗಳು ಮೈತಳೆದಿವೆ.
ಅವುಗಳನ್ನು ಅಲಂಕರಿಸಿರುವ ವರ್ಣಮಯ ಹೂವುಗಳು ಕಲಾಕೃತಿಗಳ ಸೌಂದ ರ್ಯಕ್ಕೆ ಮೆರುಗು ನೀಡಿದ್ದು, ಫಲ-ಪುಷ್ಪ ಪ್ರದರ್ಶ ನದ ದಸರಾದ ಪ್ರಮುಖ ಆಕರ್ಷಣೆಯಾಗಿವೆ. ಸೇವಂತಿಗೆ, ಗುಲಾಬಿ, ಆರ್ಕಿಡ್, ಚೆಂಡು ಹೂ ಸೇರಿದಂತೆ ಬಣ್ಣ ಬಣ್ಣದ ಹೂವುಗಳು ಮೇಳೈಸಿದ್ದು, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತಿವೆ. ಅಲಂಕಾರಿಕ ಹೂವಿನ ಗಿಡಗಳು ತಾಜಾತನದಿಂದ ಪರಿಮಳವನ್ನು ಬೀರುತ್ತಿದ್ದು, ಗಾಜಿನ ಮನೆಯೊಳಗೆ ಪುಷ್ಪಲೋಕ ಸೃಷ್ಟಿಯಾಗಿದೆ. ಈ ಫಲಪುಷ್ಪ ಪ್ರದರ್ಶನ ಪ್ರಾರಂಭವಾಗಿದ್ದು, ಅ.12ರವರೆಗೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಇತರರಿದ್ದರು.