ಮುಂಬಯಿ: ವಿರಾರ್ ಸಾಯಿಧಾಮ ಮಂದಿರ ಟ್ರಸ್ಟ್ ಇದರ ಐದನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವದ ಪೂರ್ವಭಾವಿ ಸಭೆಯು ಮೀರಾರೋಡ್ ಪೂರ್ವದ ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸೌತ್ ಇಂಡಿಯನ್ ಫೆಡರೇಶನ್ ಅಧ್ಯಕ್ಷ ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅವರು ಮಾತನಾಡಿ, ಲಕ್ಷಾಂತರ ಮಂದಿ ಈವರೆಗಿನ ಎಲ್ಲಾ ಉತ್ಸವಗಳಲ್ಲಿ ಭಾಗವಹಿಸಿ ಶ್ರೀನಿವಾಸ ದೇವರ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ. ನ. 11ರಂದು ನಲಸೋಪರ ಪಶ್ಚಿಮದ ಶ್ರೀಪ್ರಸ್ಥಾ ಮೈದಾನದಲ್ಲಿ ಶ್ರೀನಿವಾಸ ಮಂಗಲ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಅಪರಾಹ್ನ ಶ್ರೀದೇವಿ-ಭೂದೇವಿಯರ ಶೋಭಾಯಾತ್ರೆ ನಲಸೋಪರ ಪೂರ್ವದ ವರ್ತಕ್ ಟವರ್ ತುಳಿಂಜ್ ರೋಡ್‌ನಿಂದ ಪ್ರಾರಂಭಗೊಂಡು ಶ್ರೀನಿವಾಸ ಮಂಗಲ ಮಹೋತ್ಸವದ ಸ್ಥಳವನ್ನು ತಲುಪಲಿದೆ.
ಕರ್ನಾಟಕದ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಅನಾವರಣಗೊಳ್ಳಲಿದ್ದು, ಮೀರಾರೋಡ್‌ನಿಂದ ಬಸ್‌ನ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ಉತ್ಸವವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಶ್ರೀ ಮಹಾಲಿಂಗೇಶ್ವರ ಮಂದಿರದ ಟ್ರಸ್ಟಿಹಾಗೂ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರು ಸ್ವಾಗತಿಸಿ, ತಿರುಪತಿ ತಿಮ್ಮಪ್ಪದ ದರ್ಶನ ಯೋಗ ಮಾತ್ರದಿಂದ ದೊರಕಲು ಸಾಧ್ಯ. ದೈವ ಇಚ್ಛೆಯಂತೆ ಶ್ರೀನಿವಾಸ ನಮ್ಮಲ್ಲಿಗೆ ಬರುತ್ತಿದ್ದಾನೆ. ಭಕ್ತಿಪೂರ್ವಕವಾಗಿ ಸ್ತುತಿಸಿ ಜೀವನ ಸಾರ್ಥಕಗೊಳಿಸೋಣ ಎಂದರು.
ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಬಾಬಾ ರಂಜನ್ ಶೆಟ್ಟಿ, ವೆಂಕಟೇಶ್ ಪಾಟೀಲ್, ಅನಿಲ್ ಶೆಟ್ಟಿ, ಭಾಗವತರಾದ ಎಳ್ಳಾರೆ ಶಂಕರ ನಾಯಕ್, ಅಜಿತ್ ಶೆಟ್ಟಿ ಬೆಳಾ¾ಣ್, ಹೇಮಂತ್ ಸಂಕಪಾಲ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂಗಾರಿಕ ಸಂಕಷ್ಟಿಯ ನಿಮಿತ್ತ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಸಾಂತಿಂಜ ಮಾಧವ ಭಟ್, ಸುರೇಶ್ ಭಟ್ ಕುಂಟಾಡಿ, ವಿಠಲ್ ಭಟ್, ರಾಘವೇಂದ್ರ ಭಟ್ ಮಾಣಿ, ಗಣೇಶ್ ರಾವ್ ಪಡುಬಿದ್ರೆ ಅವರು ಪೂಜಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಸುಮಿತ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.