Advertisement

ಬಸ್‌ ಸ್ಥಗಿತ; ಗ್ರಾಮೀಣರ ಗೋಳಾಟ

03:22 PM Nov 11, 2019 | Naveen |

ಶೃಂಗೇರಿ: ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ಹಲವು ವರ್ಷದಿಂದ ಇದ್ದ ಬಸ್‌ ಸಂಚಾರ ವ್ಯವಸ್ಥೆಯನ್ನು ಈ ವರ್ಷ ಅನೇಕ ಹಳ್ಳಿಗಳ ಸಂಚಾರ ರದ್ದುಪಡಿಸಿರುವುದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

Advertisement

ಪಟ್ಟಣದ ಅವಲಂಬನೆ ಈಗ ಹೆಚ್ಚಾಗುತ್ತಿದ್ದು, ಅಗತ್ಯ ವಸ್ತು, ಶಿಕ್ಷಣ, ಆಸ್ಪತ್ರೆ ಮುಂತಾದ ದಿನ ನಿತ್ಯದ ಅಗತ್ಯಕ್ಕಾಗಿ ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆ ತೆರಳಬೇಕಿದೆ. ಗ್ರಾಮೀಣ ಪ್ರದೇಶದ ಬಸ್‌ ಸೌಲಭ್ಯವನ್ನು ನಂಬಿಕೊಂಡು ಪಟ್ಟಣದ ಶಾಲೆಗೆ ಸೇರ್ಪಡೆ ಮಾಡಿದ ಪೋಷಕರು ಇದೀಗ ಬಸ್‌ ಸೇವೆ ಸ್ಥಗಿತಗೊಂಡು ಮಕ್ಕಳು ಶಾಲೆಗೆ ತೆರಳದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಗ್ರಾಮೀಣ ಭಾಗವಾದ ಹಾಲಂದೂರು, ಕಿಗ್ಗಾ, ಬುಕಡಿಬೈಲು, ಕೂತಗೋಡು ಗ್ರಾಪಂ ವ್ಯಾಪ್ತಿಯ ತೆಕ್ಕೂರಿಗೆ ಖಾಸಗಿ ಬಸ್‌ ಸೇವೆ ಇದ್ದು, ಈ ವರ್ಷ ಬಹುತೇಕ ಬಸ್‌ ಸಂಚಾರ ಹಿಂಪಡೆದಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಖಾಸಗಿ ವಾಹನಕ್ಕೆ ದುಬಾರಿ ದರ ನೀಡಿ ತೆರಳುವಂತಾಗಿದೆ. ಪಟ್ಟಣದ ಕಚೇರಿ ಕೆಲಸ, ಆಸ್ಪತ್ರೆಗೆ ತೆರಳುವ ರೋಗಿಗಳು ಬಸ್‌ ಸಂಚಾರ ಸ್ಥಗಿತದಿಂದ ಪ್ರತಿ ದಿನವೂ ದುಬಾರಿ ದರ ನೀಡಿ ತೆರಳಬೇಕಿದೆ.

ತೆಕ್ಕೂರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದರೂ, ಆಂಗ್ಲ ಮಾಧ್ಯಮ ಇಲ್ಲದೇ ಇರುವುದರಿಂದ ಪಟ್ಟಣದ ಶಾಲೆಗೆ ಮಕ್ಕಳನ್ನು ಸೇರ್ಪಡೆ ಮಾಡಿರುವ ಪೋಷಕರು, ಬಸ್‌ ಸ್ಥಗಿತದಿಂದ ತೊಂದರೆಗೆ ಒಳಗಾಗಿದ್ದಾರೆ. ಪಟ್ಟಣದಿಂದ 8-10 ಕಿಮೀ ದೂರವಿರುವ ತೆಕ್ಕೂರು ಮತ್ತಿತರ ಹಳ್ಳಿಯಿಂದ ಪಟ್ಟಣಕ್ಕೆ ತೆರಳುತ್ತಿದ್ದರು. ಉತ್ತಮ ಡಾಂಬರು ರಸ್ತೆ ಹೊಂದಿರುವ ತೆಕ್ಕೂರಿಗೆ ಈ ಹಿಂದೆ ಶಾಲಾ ವೇಳೆಗೆ ಅಗತ್ಯ ಬಸ್‌ ಸೌಕರ್ಯವಿತ್ತು.

ಶೃಂಗೇರಿಯಿಂದ ತೆಕ್ಕೂರಿನವರೆಗೆ ಹತ್ತಾರು ಹಳ್ಳಿಗಳಿದ್ದು, ಬಹುತೇಕ ಎಲ್ಲಾ ಕೆಲಸಗಳಿಗೆ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಮಾರಿಮಕ್ಕಿ, ಅತ್ತೂಳ್ಳಿ, ಬೋಳೂರು, ಗುಂಡ್ರೆ, ತೆಕ್ಕೂರು, ಕೊಡ್ತಲು, ಕೊಚ್ಚವಳ್ಳಿ, ವಡಗಿನಬೈಲು, ವೈಕುಂಠಪುರ, ವಡಗಿನಬೈಲು, ಸುಂಕುರ್ಡಿ, ಕಲ್ಕಟ್ಟೆ ಸಹಿತ ಅನೇಕ ಹಳ್ಳಿಗಳಿದೆ. ಪ್ರೌಢಶಾಲೆ ವೈಕುಂಠಪುರದಲ್ಲಿದ್ದರೂ, ಅಲ್ಲಿಗೆ ಮಕ್ಕಳು ತೆರಳಲು ಸಾಕಷ್ಟು ದೂರ ಕ್ರಮಿಸಬೇಕು.

Advertisement

ಕಾಲೇಜು ಶಿಕ್ಷಣಕ್ಕೆ ಪಟ್ಟಣಕ್ಕೆ ತೆರಳಬೇಕಿದೆ. ಆರೋಗ್ಯ ಸೇವೆ, ಕಚೇರಿ ಕೆಲಸಕ್ಕೆ ಪಟ್ಟಣಕ್ಕೆ ತೆರಳುವುದು ಅನಿವಾರ್ಯವಾಗಿದೆ. ಚಿಕ್ಕ ಮಕ್ಕಳನ್ನು ಪ್ರತಿ ದಿನವೂ ಬಸ್‌ಗೆ ಕಳುಹಿಸುತ್ತಿದ್ದ ಪೋಷಕರು ಈಗ ಖಾಸಗಿ ವಾಹನಕ್ಕೆ ದುಬಾರಿ ದರ ನೀಡಿ, ಮಕ್ಕಳನ್ನು ಕಳುಹಿಸುವ ಅನಿವಾರ್ಯತೆ ಉಂಟಾಗಿದೆ.

ಬಸ್‌ ಸಂಚಾರ ಸ್ಥಗಿತಗೊಂಡಿರುವುದು ಸಾಮಾನ್ಯ ವರ್ಗಕ್ಕೆ ಹೆಚ್ಚು ತೊಂದರೆಯಾಗಿದ್ದು, ಸಣ್ಣ ಪುಟ್ಟ ಕೆಲಸಕ್ಕೂ ಅ ಧಿಕ ಹಣ ನೀಡಿ ಪಟ್ಟಣಕ್ಕೆ ತೆರಳಬೇಕಿದೆ. ಬೇರೆ ಊರಿಗೆ ತೆರಳಬೇಕಾದರೂ ಪಟ್ಟಣಕ್ಕೆ ಬಂದು ಬೇರೆ ಬಸ್‌ ಮೂಲಕ ತೆರಳಬೇಕು. ಆದರೆ ಸಕಾಲಕ್ಕೆ ಪಟ್ಟಣಕ್ಕೆ ಬರುವುದೇ ದೊಡ್ಡ ಸಮಸ್ಯೆಯಾಗಿದೆ. ಬಸ್‌ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಬಳಿಗೆ ಗ್ರಾಮಸ್ಥರ ನಿಯೋಗ ತೆರಳಿ, ಮನವಿ ಸಲ್ಲಿಸಿತ್ತು.

ಶಾಲಾ ಕಾಲೇಜು ವೇಳೆಗೆ ಬಸ್‌ ಸೇವೆ ಒದಗಿಸುವಂತೆ ಮನವಿ ಮಾಡಲಾಗಿತ್ತು.ಇದಲ್ಲದೇ ಖಾಸಗಿ ಬಸ್‌ ಮಾಲಿಕರಿಗೂ ಬಸ್‌ ಸೇವೆ ನೀಡುವಂತೆ ಮನವಿ ಮಾಡಿದ್ದರೂ, ಬಸ್‌ ಸೇವೆ ಮಾತ್ರ ಇದುವರೆಗೂ ಆಗಿಲ್ಲ.ಜಿಲ್ಲಾ ಧಿಕಾರಿಗಳು ಬಸ್‌ ಸೌಕರ್ಯ ಮಾಡಿಸುವ ಭರವಸೆ ನೀಡಿದ್ದರೂ, ಬಸ್‌ ಸಂಚಾರ ಮಾತ್ರ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next