Advertisement

ಭತ್ತದ ಗದ್ದೆಗೆ ಸುರುಳಿ ಹುಳು ಕಾಟ

01:28 PM Sep 09, 2019 | Naveen |

ರಮೇಶ್‌ ಕರುವಾನೆ
ಶೃಂಗೇರಿ:
ಹುಬ್ಟಾ ಮಳೆಯ ಅಬ್ಬರಕ್ಕೆ ತಾಲೂಕಿನ ಕಸಬಾ ಹಾಗೂ ಕಿಗ್ಗಾ ಹೋಬಳಿ ಸುತ್ತಮುತ್ತ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಸುರುಳಿ ಹುಳದ ಕಾಟದಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.

Advertisement

ಈಗಾಗಲೇ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಮುಗಿದಿದ್ದು, ಕಳೆದ ವರ್ಷ ಸುಮಾರು 1800 ಹೆಕ್ಟೇರ್‌ ಪ್ರದೆಶದಲ್ಲಿ ಭತ್ತ ಬೆಳೆಯಲಾಗಿತ್ತು. ಆದರೆ, ಭತ್ತ ಬೆಳೆಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಒಂದೆಡೆ ಕ್ರಿಮಿಕೀಟ ಭಾದೆ, ರೋಗ ಭಾದೆ, ಕಾಡುಪ್ರಾಣಿಗಳ ಹಾವಳಿ. ಇನ್ನೊಂದೆಡೆ ಮುಖ್ಯವಾಗಿ ಕಾರ್ಮಿಕರ ಕೊರತೆ ಇದಕ್ಕೆ ಕಾರಣವಾಗಿದೆ. ಕಾರ್ಮಿಕರ ಸಂಬಳವನ್ನು ಲೆಕ್ಕ ಹಾಕಿದರೆ ಭತ್ತವನ್ನು ಬೆಳೆಯುವುದು ಮಲೆನಾಡಿನ ಭಾಗದ ರೈತರಿಗೆ ಕಷ್ಟಕರ ಎಂಬ ಮಾತು ಕೇಳಿ ಬರುತ್ತಿದೆ.

ನಾಟಿ ಮಾಡಲು, ಭತ್ತ ಕುಯ್ಲು ಮಾಡಲು, ಹುಲ್ಲು ಕಟ್ಟಲು ಸಹ ಯಂತ್ರೋಪಕರಣಗಳು ಬರುತ್ತಿವೆ. ಆದರೆ, ರೈತರು ಮಾತ್ರ ಭತ್ತ ಬೆಳೆಯುವತ್ತ ಗಮನ ಹರಿಸುತ್ತಿಲ್ಲ.

ಕೃಷಿಕ ಹೊಸ್ಕೆರೆ ಅಶೋಕ್‌ ಪ್ರಕಾರ, ಒಂದು ಎಕರೆ ಭತ್ತದ ಗದ್ದೆಯಲ್ಲಿ ಬೆಳೆ ತೆಗೆಯಬೇಕಾದರೆ ಕನಿಷ್ಟ 20 ಸಾವಿರ ರೂ. ಖರ್ಚಾಗುತ್ತದೆ. ಇದರಲ್ಲಿ ನಮಗೆ ಸಿಗುವ ಲಾಭಾಂಶ ಅತೀ ಕಡಿಮೆ. ಮನೆಗೆ ಬೇಕಾಗುವಷ್ಟು ಭತ್ತ ಮಾತ್ರ ಬೆಳೆಯುತ್ತಿದ್ದೇವೆ ಎನ್ನುತ್ತಾರೆ.

ಸುರುಳಿ ಹುಳುಗಳು ಭತ್ತದ ಸಸಿಗಳನ್ನು ಕಾಂಡದ ಬಳಿಯೇ ತುಂಡರಿಸಿ ಹಾಕುತ್ತವೆ. ಇದರಿಂದ ಭತ್ತದ ಸಸಿಗಳು ನೆಲಕಚ್ಚುತ್ತವೆ. ಬಿಟ್ಟುಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನಾಟಿ ಮಾಡಿದ ಸಸಿಗಳಿಗೆ ಔಷಧಿ ಸಿಂಪಡಣೆಗೆ ತೊಡಕಾಗಿದೆ. ಬಿಸಿಲು ಬೀಳದ ಕಾರಣ ಏನೂ ಮಾಡಲು ಸಾಧ್ಯವಾಗದೆ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದು ತಾಲೂಕಿನ ಬೆಳಂದೂರು ಗ್ರಾಮದ ನೇರಳಕುಡಿಗೆ ನಾಗೇಂದ್ರರಾವ್‌ ತಿಳಿಸಿದರು. ಒಟ್ಟಾರೆ ರೈತರು ಭತ್ತ ಕೃಷಿ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈಗಾಗಲೇ ತಾಲೂಕಿನಲ್ಲಿ ಭತ್ತದ ಗದ್ದೆಗಳು ಪಾಳುಬಿದ್ದಿವೆ. ಅಲ್ಪ ಸ್ವಲ್ಪ ಗದ್ದೆಗಳಲ್ಲಿ ಕೆಲ ರೈತರು ಭತ್ತ ಕೃಷಿ ಮಾಡುತ್ತಿದ್ದಾರೆ. ಇದೀಗ ಹುಳುಗಳ ಕಾಟದಿಂದ ರೈತರು ಹೈರಾಣಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ.

Advertisement

ತಾಲೂಕಿನಾದ್ಯಂತ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಾಗಿದ್ದು, ಆಹಾರ ಬೆಳೆಯಾದ ಭತ್ತದ ಗದ್ದೆಗಳಿಗೆ ರೋಗಭಾದೆ, ಕೀಟಭಾದೆಗಳು ಕಾಣಿಸಿಕೊಂಡಿವೆ. ಕೃಷಿ ಇಲಾಖೆ ರೈತರಿಗೆ ಮಾರ್ಗದರ್ಶನ ಮಾಡಿದ್ದು, ಸೂಕ್ತ ಔಷಧ ಸಿಂಪಡಣೆ ಮಾಡುವಂತೆ ರೈತರಿಗೆ ಸೂಚಿಸಲಾಗಿದೆ. ಭತ್ತ ಇಳುವರಿ ಮೇಲೆ ರೋಗಭಾದೆ ಹೆಚ್ಚು ಪರಿಣಾಮವಾಗಲಾರದು. ರೈತರು ಸತತವಾಗಿ ಇಲಾಖೆಯೊಂದಿಗೆ ಸಂಪರ್ಕದಲ್ಲಿರಬೇಕು. ಯಾವುದೇ ಕಾರಣಕ್ಕೂ ಭತ್ತ ಬೆಳೆಯಲು ಆಸಕ್ತಿ ಕಳೆದುಕೊಳ್ಳಬಾರದು.
ಸಚಿನ್‌ ಹೆಗ್ಡೆ, ತಾಲೂಕು ಕೃಷಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next