ಶೃಂಗೇರಿ: ಸಂಸ್ಕೃತ ಭಾಷೆ ಉಳಿಯಬೇಕಾದರೆ ಅದು ಜನಸಾಮಾನ್ಯರ ಭಾಷೆಯಾಗಬೇಕು ಎಂದು ಶ್ರೀ ಶಾರದಾ ಪೀಠದ ಹಿರಿಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ಮಠದ ಗುರುಭವನದಲ್ಲಿ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜು ಶುಕ್ರವಾರ ಏರ್ಪಡಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪುರಾತನವಾದ ಸಂಸ್ಕೃತ ಭಾಷೆಯ ಉಳಿವಿಗೆ ಶ್ರಮಿಸುವ ಅಗತ್ಯವಿದೆ. ದೇವ ಭಾಷೆ ಎಂದೇ ಹೆಸರಾಗಿದ್ದ ಸಂಸ್ಕೃತ ಕಲಿಯುವುದು ಕಷ್ಟವೇನಲ್ಲ. ಆದರೆ, ಬಳಕೆ ಕಡಿಮೆಯಾಗಿದೆ. ಸಂಸ್ಕೃತ ಭಾಷೆ ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮಾಧರ್ಮದ ಜ್ಞಾನಕ್ಕಾಗಿ ಹಾಗೂ ಅಲೌಕಿಕ ಜ್ಞಾನ ಪ್ರಾಪ್ತಿಗಾಗಿ ಸಂಸ್ಕೃತ ಭಾಷೆ ಅತ್ಯವಶ್ಯಕ. ವೇದ, ಶಾಸ್ತ್ರ, ಕಾವ್ಯ ಹಾಗೂ ಪುರಾಣ ಮುಂತಾದವುಗಳು ಬಹು ಪ್ರಮಾಣದಲ್ಲಿ ಸಂಸ್ಕೃತ ಭಾಷೆಯಲ್ಲಿಯೇ ಇರುವುದರಿಂದ ಅವುಗಳ ಪ್ರಮಾಣವೇ ಎಲ್ಲ ವಿಷಯಗಳಿಗೂ ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಸುಸಂಸ್ಕೃತರಾಗಲೆಂದೇ ಪೋಷಕರು ವಿದ್ಯಾರ್ಥಿಗಳನ್ನು ಸಂಸ್ಕೃತ ಅಧ್ಯಯನಕ್ಕೆ ಕಳುಹಿಸುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ಇದನ್ನು ಅರಿತು ಸಂಸ್ಕೃತ ಭಾಷೆಯನ್ನು ಸರಿಯಾಗಿ ಕಲಿತು ಅದರ ಪ್ರಚಾರಕ್ಕಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾಪೀಠದ ವಾಕ್ಯಾರ್ಥ ಭಾರತೀ ಪುಸ್ತಕವನ್ನು ಜಗದ್ಗುರುಗಳು ಬಿಡುಗಡೆಗೊಳಿಸಿದರು. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ| ಎ.ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಸುಬ್ರಾಯ ಭಟ್ಟ ಮತ್ತು ಸಂಯೋಜಕ ಚಂದ್ರಶೇಖರ ಭಟ್ಟ ಉಪಸ್ಥಿತರಿದ್ದರು.