ಶೃಂಗೇರಿ: ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಸಮೀಪದ ಕಿಗ್ಗಾ ಶ್ರೀ ಶಾಂತ ಸಮೇತ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಮಹಾ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ವಿಕಾರಿನಾಮ ಸಂವತ್ಸರದ ಚೈತ್ರ ಶುಕ್ಲ ಅಷ್ಟಮಿ ಆರಿದ್ರಾ ನಕ್ಷತ್ರದಲ್ಲಿ ನಡೆಯುವ ಮಹಾರಥೋತ್ಸವದ ಅಂಗವಾಗಿ ಕಳೆದ ವಾರದಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶುಕ್ರವಾರ ಸಿದ್ಧಿ ಹೇರಂಭ ಪೂಜೆ, ಧ್ವಜಾರೋಹಣ ನೆರವೇರಿತು.
ಬೆಳಗ್ಗೆ ಋಷ್ಯಶೃಂಗೇಶ್ವರ ಸ್ವಾಮಿಗೆ ಮತ್ತು ಶ್ರೀ ಶಾಂತಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭೂತ ಬಲಿ, ಶಯನೋತ್ಸವಗಳು ನಡೆದ ನಂತರ ದೇವರ ಉತ್ಸವ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಎದುರು ನಿಂತಿರುವ ರಥ ಬಳಿ ತರಲಾಯಿತು. ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿಸಿ ನಂತರ ಶ್ರೀ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಭಕ್ತರು ರಥವನ್ನು 100 ಮೀ ದೂರದ ವರೆಗೆ ಎಳೆದರು. ರಥ ಬೀದಿಯನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು.
ಬೀದಿಯ ಇಕ್ಕೆಲಗಳಲ್ಲಿ ಬಾಳೆ ಕಂಬ, ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ರಥದ ಎದುರು ಛತ್ರಿ-ಛಾಮರ ಹೊತ್ತು ಭಕ್ತರು ಸಾಗಿದರು.
ಬೆಳಗ್ಗೆ 7 ಗಂಟೆಗೆ ರಥಾರೋಹಣದ ಮುಹೂರ್ತ ಇರುವುದರಿಂದ ಬೇಗನೆ ರಥೋತ್ಸವ ನಡೆಯಿತು. ರಾತ್ರಿ 8 ಗಂಟೆಯಿಂದ ಪುನಃ ರಥೋತ್ಸವ ನಡೆಯಲಿದ್ದು, ಬೆಳಗ್ಗೆ ನಿಲ್ಲಿಸಿದ ರಥವನ್ನು ಪುನಃ ದೇವಸ್ಥಾನದ ಮುಂಭಾಗದ ವರೆಗೆ ಎಳೆದು ತರಲಾಗುತ್ತದೆ. ತಹಶೀಲ್ದಾರ್ ಪಟ್ಟ ರಾಜೇಗೌಡ, ಇ.ಒ.ಮೂಕಪ್ಪ ಗೌಡ, ಶ್ರೀಮಠದ ಅಧಿ ಕಾರಿ ಶಿವಶಂಕರ ಭಟ್, ಕಿಗ್ಗಾ ದೇವಸ್ಥಾನದ ಅರ್ಚಕರಾದ ಶಿವರಾಂ ಭಟ್, ವಿಶ್ವನಾಥ ಭಟ್, ಶಾನುಭೋಗ ಅರುಣಾಚಲ ಮತ್ತಿತರರಿದ್ದರು. ಶನಿವಾರ ರಥೋತ್ಸವದ ಅಂಗವಾಗಿ ಮಧ್ಯಾಹ್ನ ಶೈವ ಮಹಾಯಾಗದ ಪೂರ್ಣಾಹುತಿ ಹಾಗೂ ಭಾನುವಾರ ಮಹಾಸಂಪ್ರೋಕ್ಷಣೆ, ಪವಿತ್ರ ಕುಂಭಾರಾಧನೆ ನಡೆಯಲಿದೆ.