ರಮೇಶ್ ಕರುವಾನೆ
ಶೃಂಗೇರಿ: ಕಾಡುಪ್ರಾಣಿಗಳ ವಿಪರೀತ ಕಾಟದಿಂದ ಮಲೆನಾಡಿನ ರೈತರು ಹೈರಾಣಾಗಿದ್ದು, ಬೆಳೆದ ಬೆಳೆ ಕೈಗೆ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಒಂದೆಡೆ 10-20 ಮಂಗಗಳ ಗುಂಪು ಒಮ್ಮೆಲೆ ರೈತರ ತೋಟ-ಗದ್ದೆಗಳಿಗೆ ದಾಳಿ ಮಾಡಿದರೆ, ಮತ್ತೂಂದೆಡೆ ಹಂದಿ, ನವಿಲು, ಮುಳ್ಳುಹಂದಿಗಳು ರೈತರ ತೋಟ-ಗದ್ದೆಗಳಲ್ಲಿಯೇ ಕಾಯಂ ವಾಸಸ್ಥಾನ ಮಾಡಿಕೊಂಡಿವೆ.
ರೈತರ ಅಡಕೆ ತೋಟದಲ್ಲಿ ಅಡಕೆಯನ್ನೇ ತಿಂದು ಹಿಪ್ಪೆ ಮಾಡಿದ ಮಂಗಗಳು, ನಂತರ ತೋಟದಲ್ಲಿರುವ ಬಾಳೆಕಾಯಿಗಳನ್ನು ಸಂಪೂರ್ಣವಾಗಿ ತಿಂದು ತೇಗಿವೆ. ಇದರ ಬೆನ್ನಲ್ಲೇ, ಮುಳ್ಳುಹಂದಿಗಳು ರೈತರ ಅಡಕೆ ಮರದ ಬುಡ, ಬಾಳೆ ಗಿಡದ ಗೆಡ್ಡೆ, ತೆಂಗಿನ ಗಿಡಗಳ ಬುಡವನ್ನೇ ಅಗೆದು ತಿಂದು ತೋಟವನ್ನು ಬರಿದು ಮಾಡುವ ಹಂತಕ್ಕೆ ತಲುಪಿಸಿವೆ. ಮನೆಯ ಖರ್ಚಿಗಾಗಿ ಹಳ್ಳಿಯ ಮನೆಗಳ ಮನೆಯಂಗಳದಲ್ಲಿ ಬೆಳೆದದ ಅಲ್ಪ-ಸ್ವಲ್ಪ ತರಕಾರಿಗಳು ಕೂಡ ಮಂಗಗಳ ಪಾಲಾಗುತ್ತಿರುವುದು ರೈತರ ನಿದ್ದೆಗೆಡಸಿದೆ.
ಇನ್ನು ತಾಲೂಕಿನ ಕೆಲವೆಡೆ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು, ತೋಟಗಳನ್ನೇ ನಾಶ ಮಾಡುತ್ತಿವೆ. ಈಗಾಗಲೇ ತಾಲೂಕಿನಾದ್ಯಂತ ಭತ್ತದ ಗದ್ದೆಗಳಲ್ಲಿ ಪೈರು ಕಟ್ಟುತ್ತಿದ್ದು, ಕಾಡುಕೋಣ, ಮೊಲ, ಹಂದಿಗಳು, ಮಂಗಗಳು ಭತ್ತದ ಗದ್ದೆಗಳ ಮೇಲೆ ದಾಳಿ ಮಾಡಲು ಆರಂಭಿಸಿವೆ. ಇದರೊಂದಿಗೆ ನವಿಲು ಹಕ್ಕಿಯು ಇತರ ಪ್ರಾಣಿಗಳಿಗಿಂತ ತಾನೇನು ಕಮ್ಮಿ ಇಲ್ಲ ಎಂದು ಭತ್ತದ ತೆನೆಗಳನ್ನು ಕುಕ್ಕಲಾರಂಭಿಸಿದೆ.
ಪ್ರತಿ ವರ್ಷ ಕಾಡು ಪ್ರಾಣಿಗಳ ಸಂತತಿ ಜಾಸ್ತಿಯಾಗ ತೊಡಗಿದೆ. ಇದರಿಂದಾಗಿ ರೈತರು ಕೃಷಿಯಿಂದ ವಿಮುಖರಾಗುವ ಹಂತಕ್ಕೆ ತಲುಪಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆ, ಬೆಳೆದ ಬೆಳೆಗೆ ಉತ್ತಮ ದರ ಇಲ್ಲದಿರುವುದು, ವರ್ಷದಿಂದ ವರ್ಷಕ್ಕೆ ಕೃಷಿಯಿಂದ ಬರುವ ಆದಾಯಕ್ಕೆ ಹೊಡೆತ ಇತ್ಯಾದಿ ಕಾರಣಗಳಿಂದಾಗಿ ಹೈರಣಾಗಿದ್ದಾರೆ. ಅಲ್ಲದೇ, ಈಗಾಗಲೇ ತಾಲೂಕಿನ ಬಹುತೇಕ ಅಡಕೆ ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿದ್ದು, ಸ್ವಲ್ಪ ತೋಟವನ್ನು ಉಳಿಸಿಕೊಳ್ಳುವತ್ತ ಹರಸಾಹಸಪಡಬೇಕಿದೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಧಾವಿಸುದೇ ಕಾದು ನೋಡಬೇಕಿದೆ.